ಉದಯವಾಹಿನಿ, ಬೆಂಗಳೂರು: ಕೇಂದ್ರ ಸರಕಾರವು 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮಥ್ರ್ಯದ ಕರ್ನಾಟಕದ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಪ್ರೀಂ ಕೋರ್ಟ್‍ನಲ್ಲಿ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲರೇ ಮೆಟ್ಟೂರು ಜಲಾಶಯಕ್ಕೆ ಮೇಲ್ಭಾಗದಲ್ಲಿ ಕರ್ನಾಟಕ ಜಲಾಶಯ ನಿರ್ಮಾಣ ಮಾಡಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿಗಳು ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಮಧ್ಯಪ್ರವೇಶ ಮಾಡಬೇಕು. ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹಾರ ಮಾಡಬೇಕು. ಇದಷ್ಟೇ ಎಲ್ಲರಿಗೂ ನನ್ನ ಪ್ರಾರ್ಥನೆ ಎಂದು ಮಾಜಿ ಪ್ರಧಾನಿಗಳು ಕೈ ಜೋಡಿಸಿ ಮನವಿ ಮಾಡಿಕೊಂಡಿದ್ದಾರೆ.
ಮೇಕೆದಾಟು ಯೋಜನೆಯ ವಿಷಯವನ್ನು ಪ್ರಸ್ತಾಪ ಮಾಡಿದ ಗೌಡರು, ತಮಿಳುನಾಡು ಸ್ನೇಹಿತರು ಅನ್ಯತಾ ಭಾವಿಸಬಾರದು ಎನ್ನುತ್ತಲೇ ರಾಜ್ಯದ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸದಸ್ಯರ ಆಕ್ಷೇಪಣೆ, ಗದ್ದಲದ ನಡುವೆಯೂ ತಮ್ಮ ಮಾತುಗಳನ್ನು ಮುಂದುವರಿಸಿದ ಅವರು; ಜಂತರ್‍ಮಂತರ್‍ನಲ್ಲಿ ಕಾಂಗ್ರೆಸ್‍ನವರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಅವರು ನನ್ನನ್ನೂ ಸೇರಿ ಎಲ್ಲರನ್ನೂ ಬರುವಂತೆ ಕರೆದಿದ್ದಾರೆ. ಈ ದೇಶದ ರಾಜಕೀಯ ಪರಿಸ್ಥಿತಿ ಹೇಗಾಗಿದೆ ಎಂದರೆ, ರಾಜಕೀಯ ಲಾಭಕ್ಕಾಗಿ ಅನಗತ್ಯ ವೆಚ್ಚದ ಅನುತ್ಪಾದಕ ವೆಚ್ಚಗಳನ್ನು ಯಥೇಚ್ಛವಾಗಿ ಮಾಡಲಾಗುತ್ತಿದೆ. ನಾನೆಂದೂ ಇಂಥದ್ದನ್ನು ಮಾಡಿಲ್ಲ ಎಂದರು.
