ಉದಯವಾಹಿನಿ, ಬೆಂಗಳೂರು: ನಗರದ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ಪೂರೈಕೆ ಮಾಡುವ ಕುರಿತಂತೆ ಕರೆಯಲಾಗುವ ಟೆಂಡರ್ ವಿಳಂಬವಾಗಿರುವುದರಿಂದ ಏಪ್ರಿಲ್ ಬಳಿಕ ಇಂದಿರಾ ಕ್ಯಾಂಟೀನ್ ಗಳಲ್ಲಿ ಮುದ್ದೆ, ಸಾರು ದೊರೆಯುವ ಸಾಧ್ಯತೆಯಿದೆ. ಈ ಹಿಂದೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಕೇವಲ ರೈಸ್ ಬಾತ್, ಅನ್ನ ಸಾಂಬಾರ್, ಮೊಸರನ್ನವನ್ನು ನೀಡಲಾಗುತ್ತಿತ್ತು.ಆದರೆ ಹಿರಿಯ ನಾಗರಿಕರು ಹಾಗೂ ಸಕ್ಕರೆ ಕಾಯಿಲೆಯಿರುವವರು ಸೇರಿದಂತೆ ಇತರರು ರೈಸ್ ಪದಾರ್ಥದ ಊಟ ಮಾತ್ರ ಬೇಡ ಮುದ್ದೆ ಚಪಾತಿ ನೀಡುವಂತೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಊಟದ ಮೆನುವನ್ನು ಬದಲಾವಣೆ ಮಾಡಿ ಮುದ್ದೆ, ಸಾರು, ಚಪಾತಿ ನೀಡಲು ರಾಜ್ಯ ಸರ್ಕಾರ ಹಾಗೂ ಪಾಲಿಕೆ ಮುಂದಾಗಿತ್ತು. ಆದರೆ ಬೆಂಗಳೂರು ನಗರದ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ಟೆಂಡರ್ ವಿಳಂಬವಾಗಿರುವುದರಿಂದ ಏಪ್ರಿಲ್ ಬಳಿಕ ಮುದ್ದೆ, ಸಾರು ದೊರೆಯಲಿದೆ ಎನ್ನಲಾಗುತ್ತಿದೆ.
ಕಳೆದ ಆಗಸ್ಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ಗುತ್ತಿಗೆ ಅವ ಮುಕ್ತಾಯಗೊಂಡಿದ್ದು, ಹೊಸ ಟೆಂಡರ್ ಪ್ರಕ್ರಿಯೆ ನಡೆಯದ ಹಿನ್ನಲೆಯಲ್ಲಿ ಹಳೆ ಗುತ್ತಿಗೆದಾರರನ್ನು ಮುಂದುವರಿಸಲಾಗಿತ್ತು. ಡಿಸೆಂಬರ್‍ನಲ್ಲಿ ಟೆಂಡರ್ ಆಹ್ವಾನಿಸುವಂತೆ ಸರ್ಕಾರ ಆದೇಶ ನೀಡಿತ್ತು. ಸದ್ಯ ಎಂಟು ವಲಯಗಳಿಗೆ ಪ್ರತ್ಯೇಕ ಟೆಂಡರ್ ಆಹ್ವಾನಿಸುವುದಕ್ಕೆ ನಿರ್ಧರಿಸಿ ನಾಲ್ಕು ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆ ಗುತ್ತಿಗೆದಾರರಿಗೆ ಈ ಬಾರಿ ಮುದ್ದೆ, ಸಾರು ನೀಡುವುದನ್ನು ಕಡ್ಡಾಯಗೊಳಿಸಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ನಂತರ ಜನಸಾಮಾನ್ಯರಿಗೆ ಹೊಸ ಮೆನ್ಯು ಲಭ್ಯವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!