ಉದಯವಾಹಿನಿ,ಬೀದರ: ಬಡವರ ಆರೋಗ್ಯ ಕಾಳಜಿಯನ್ನು ಹೊತ್ತು, ಕೇಂದ್ರ ಸಚಿವರು ಹಾಗೂ ಸಂಸದರಾದ ಭಗವಂತ ಖೂಬಾರವರ ವಿಶೇಷ ಕಾಳಜಿಯಿಂದ ಆಳಂದ ತಾಲೂಕಿನಲ್ಲಿ ಎರಡು ದಿನಗಳ ಕಾಲ ಏರ್ಪಡಿಸಲಾದ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿದ್ದು, ಈ ಎರಡು ದಿವಸಗಳಲ್ಲಿ ಆಳಂದ ತಾಲೂಕಿನ 5000ಕ್ಕೂ ಹೆಚ್ಚಿನ ಜನ ಆರೋಗ್ಯ ಶಿಬಿರದ ಲಾಭವನ್ನು ಪಡೆದುಕೊಂಡಿದ್ದಾರೆ, ಸದರಿ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.
ಈ ಆರೋಗ್ಯ ಶಿಬಿರದಲ್ಲಿ ಅಭಿನವ ಶ್ರೀ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ ಕಲಬುರಗಿ, ಎಚ್.ಸಿ.ಜಿ. ಆಸ್ಪತ್ರೆ, ನಾರಾಯಣ ನೇತ್ರಾಲಯದಿಂದ ಸುಮಾರು 60 ತಜ್ಞ ನುರಿತ ವೈದ್ಯರುಗಳು ಈ ಎರಡು ದಿನಗಳ ಕಾಲ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ, ಅವಶ್ಯಕ ಚಿಕಿತ್ಸೆ, ಸಲಹೆ ಹಾಗೂ ಔಷಧ ಮತ್ತು ಶ್ರವಣ ಯಂತ್ರ ಹಾಗೂ ಕನ್ನಡಕಗಳು ನೀಡಲಾಗಿದೆ ಎಂದು ತಿಳಿಸಿದರು.
ಈ ಉಚಿತ ಆರೋಗ್ಯ ಶಿಬಿರದಲ್ಲಿ 1856 ಜನರಿಗೆ ಕನ್ನಡಕಗಳು, 450 ಶ್ರವಣ ಯಂತ್ರಗಳು, ಸುಮಾರು 1500 ಜನರಿಗೆ ಎಕ್ಸರೆ, 450 ಜನರಿಗೆ ಇ.ಸಿ.ಜಿ ಮಾಡಲಾಗಿರುತ್ತದೆ ಜೊತೆಗೆ ಸಾಕಷ್ಟು ರೋಗಿಗಳಿಗೆ ರಕ್ತಪರಿಕ್ಷೆ, ಮೂತ ಪರಿಕ್ಷೆ, ಬಿ.ಪಿ, ಶುಗರ ಮತ್ತು ಸಣ್ಣ ಪುಟ್ಟ ರೋಗಿಗಳಿಗೆ ಅಗತ್ಯ ತಪಾಸಣೆ, ಔಷಧ ಹಾಗೂ ಚಿಕಿತ್ಸೆ ನೀಡಲಾಗಿರುತ್ತದೆ, ಜೊತೆಗೆ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ 500 ಕ್ಕೂ ಹೆಚ್ಚಿನ ಜನರಿಗೆ ಆಯುಷ್ಮಾನ ಭಾರತ ಕಾರ್ಡ ಮಾಡಿಕೊಡಲಾಗಿದೆ. ಆರೋಗ್ಯ ಶಿಬಿರಕ್ಕೆ ಬಂದ ಎಲ್ಲಾ ರೋಗಿಗಳಿಗೂ ನಮ್ಮ ವೈದ್ಯರುಗಳು ಹಾಗೂ ಅವರ ತಂಡ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ, ಉತ್ತಮ ಆರೋಗ್ಯಕ್ಕಾಗಿ ಅಗತ್ಯ ಸಲಹೆಗಳು ನೀಡಿದರು.
ಬಡವರ ಆರೋಗ್ಯ ಕಾಳಜಿಯನ್ನು ನನ್ನ ಈ ಉಚಿತ ಆರೋಗ್ಯ ಶಿಬಿರಕ್ಕೆ ಸಹಕರಿಸಿ, ಯಶಸ್ವಿಗೋಳಿಸಿರುವ ತಾಲುಕು ಯುವ ಮುಖಂಡರಾದ ಹರ್ಷಾನಂದ ಗುತ್ತೆದಾರರವರಿಗೂ, ಮಂಡಲ ಅಧ್ಯಕ್ಷರಾದ ಆನಂದರಾವ ಪಾಟೀಲ್, ಪಕ್ಷದ ತಾಲುಕು ಮುಖಂಡರಿಗೆ, ಎಲ್ಲಾ ಗ್ರಾಮಗಳಲ್ಲಿರುವ ನಮ್ಮ ಪಕ್ಷದ ಕಾರ್ಯಕರ್ತರಿಗೆ, ಎಲ್ಲಾ ವೈದ್ಯರುಗಳು ಹಾಗೂ ಅವರ ತಂಡ ಮತ್ತು ಜಿಲ್ಲಾ ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆಯವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಅನಂತ ಧನ್ಯವಾಗಳನ್ನು ತಿಳಿಸಿದ್ದಾರೆ.
