ಉದುಯವಾಹಿನಿ, ಕೆ.ಆರ್.ಪುರ: ರಥಸಪ್ತಮಿ ಪ್ರಯುಕ್ತ ಬೆಂಗಳೂರು ಪೂರ್ವ ತಾಲ್ಲೂಕು ಮಹದೇವಪುರ ಕ್ಷೇತ್ರದ ವರ್ತೂರು ಗ್ರಾಮದಲ್ಲಿ ಭೂನೀಳಾಸಮೇತ ಚನ್ನರಾಯ ಸ್ವಾಮಿಯ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.
ಭೂನೀಳಾಸಮೇತ ಶ್ರೀ ಚನ್ನರಾಯಸ್ವಾಮಿಯವರ ಬ್ರಹ್ಮರಥ ಎಳೆಯುವ ಮೂಲಕ ಭಕ್ತಾದಿಗಳು ದೇವರ ಸೇವೆಯಲ್ಲಿ ಪಾಲ್ಗೊಂಡರು.
ರಥೋತ್ಸವದ ಅಂಗವಾಗಿ ಶ್ರೀ ಚನ್ನರಾಯ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪೂಜಾ ಕೈಂಕರ್ಯಗಳು ನಡೆದವು, ವರ್ತೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ, ಪೂಜಾಕುಣಿತ, ನಾದಸ್ವರ, ಸೇರಿದಂತೆ ಚಿಂಗಾರಿ ಮೇಳ, ಚಂಡಿ ಮೇಳ, ಚಟ್ಟಿಮೇಳ, ವೀರಗಾಸೆ, ಗಾರುಡಿಗೊಂಬೆ, ಡೋಳ್ಳುಕುಣಿತದೊಂದಿಗೆ ಬ್ರಹ್ಮರಥೋತ್ಸವ ಸಾಗಿತು.
ರಥೋತ್ಸವಕ್ಕೆ ವೈಟ್ ಫೀಲ್ಡ್, ವರ್ತೂರು , ವರ್ತೂರು ಕೂಡಿ, ಮಧುರ ನಗರ, ರಾಮಗೊಂಡನಹಳ್ಳಿ, ಗುಂಜೂರು, ಸೊರುಹುಣಸೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಬಡಾವಣೆಗಳ ಸಾವಿರಾರು ಭಕ್ತರು ಪಾಲ್ಗೋಂಡಿದ್ದರು. ನೇರೆದಿದ್ದ ಭಕ್ತರಿಗೆ , ಪಾನಕ ಮಜ್ಜಿಗೆ, ಅನ್ನದಾನ ಮಾಡಲಾಯಿತು. ಭಾನುವಾರ ರಾತ್ರಿ ೧೨:೩೦ ಕ್ಕೆ ಶ್ರೀ ದ್ರೌಪದಮ್ಮ ಮತ್ತು ಸ್ವಾಮಿ ಹೂವಿನ ಕರಗ ಮಹೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ಮುಖಂಡರಾದ ಬಿ.ಎಸ್.ಶ್ರೀಧರ್ ಕುಪ್ಪಿ ಮಂಜುನಾಥ್, ಮಹೇಂದ್ರಮೋದಿ, ಎಲ್.ರಾಜೇಶ್, ರವಿಶಂಕರ್, ದೀಪಕ್ ರಾಜ್ ಇತರರು ಇದ್ದರು.
