ಉದಯವಾಹಿನಿ,ಬೆಂಗಳೂರು: ನಗರದ ಹೊರವಲಯದ ಕುಂಬಳಗೋಡು ಬಳಿಯ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೃತಪಟ್ಟ ಮೂವರು ಕಾರ್ಮಿಕರಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ. ಗೊಡೌನ್ ಮಾಲಿಕ ಸಲೀಂ (೫೦), ನಾಯಂಡಹಳ್ಳಿ ನಿವಾಸಿ ಚಾಲಕ ಮೆಹಬೂಬ್ (೩೫) ಮೃತರು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆರ್‌ಆರ್ ಆಸ್ಪತ್ರೆಗೆ ರವಾನಿಸಲಾಗಿದ್ದು ಇನ್ನೂಬ್ಬನ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಾಯಗೊಂಡವರಲ್ಲಿ ೧೦ ವರ್ಷದ ಬಾಲಕನಿದ್ದು, ಈತನಿಗೆ ಶೇ೬೦ ರಷ್ಟು ಸುಟ್ಟ ಗಾಯಗಳಾಗಿವೆ.ಬಾಲಕ ರಿಹಾನ್ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಉಳಿದ ಐವರಿಗೆ ಶೇ೨೫ ರಷ್ಟು ಸುಟ್ಟ ಗಾಯಗಳಾಗಿವೆ.
ಪ್ರಕರಣ ಸಂಬಂಧ ಗೊಡೌನ್ ಮಾಲಿಕ ಸಲೀಂ ಮತ್ತು ಜಾಗದ ಮಾಲೀಕ ವಿಠ್ಠಲ್ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಎಫ್‌ಐಆರ್ ದಾಖಲಾಗಿದೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ವಿಠ್ಠಲ್ ಪರಾರಿಯಾಗಿದ್ದಾನೆ. ಐಪಿಸಿ ಸೆಕ್ಷನ್ ೪೨೦, ೩೦೪, ೪೬೭, ೬೪, ೬೭ ಅಡಿ ದೂರು ದಾಖಲಾಗಿದೆ.
ಜೀವಕ್ಕೆ ತಂದ ಕುತ್ತು: ಹೊಸ ಫ್ಯಾಕ್ಟರಿಯಾಗಿದೆ ಸಂಬಳ ಹೆಚ್ಚು ಸಿಗಲಿದೆ,ಅಲ್ಲದೆ ಮನೆ ಪಕ್ಕದಲ್ಲೇ ಕಾರ್ಖಾನೆಯಿದೆ ಎಂದು ಗಾಯಾಳುಗಳಾದ ಇರ್ಫಾನ್, ಅಪ್ರೋಜ್ ಪಾಷಾ ಒಂದು ವಾರದ ಹಿಂದಷ್ಟೆ ಕೆಲಸಕ್ಕೆ ಸೇರಿದ್ದರು. ಇರ್ಫಾನ್ ಪಾಷಾ ಸುಗಂಧ ದ್ರವ್ಯ ಫ್ಯಾಕ್ಟರಿಯಲ್ಲಿ ಕ್ಯಾಂಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆದರೆ ಹೆಚ್ಚಿನ ಸಂಬಳ ನೀಡುತ್ತಾರೆ ಎಂಬ ಆಸೆಯಿಂದ ಡ್ರೈವರ್ ಕೆಲಸ ಬಿಟ್ಟು ಫ್ಯಾಕ್ಟರಿಗೆ ಸೇರಿದ್ದನು.
ನಿನ್ನೆ ರಜೆಯಿದ್ದರಿಂದ, ಇರ್ಫಾನ್ ಪಾಷಾಗೆ ಊಟ ಕೊಡಲು ಅಪ್ರೋಜ್ ಪಾಷಾ, ಅಪ್ರೋಜ್ ಪಾಷಾರ ಮಗ ಮತ್ತು ಅಪ್ರೋಜ್ ಪಾಷಾರ ಅಕ್ಕನ ಮಗ ಕಾರ್ಖಾನೆಗೆ ಹೋಗಿದ್ದರು. ಈ ವೇಳೆ ಕಾರ್ಖಾನೆಯಲ್ಲಿ ಧಿಡೀರನೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಐವರು ಹೊರಗೆ ಓಡಿ ಬಂದರೂ, ಬೆಂಕಿ ತಗುಲಿತ್ತು. ಗಾಯಾಳುಗಳು ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯಿಸಿದ್ದು, ರಾಮಸಂದ್ರದಲ್ಲಿ ಸಂಜೆ ೫ ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಸಲೀಂ ಸೇರಿ ಮೂವರು ಮೃತಪಟ್ಟಿದ್ದಾರೆ.ಗಾಯಾಳು ಐವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!