ಉದಯವಾಹಿನಿ, ಬೆಂಗಳೂರು: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಅದಕ್ಕೆ ಬೇಕಾದ ಹಣವನ್ನು ಒದಗಿಸಿ ಸಂಪೂರ್ಣ ಜಾರಿ ಮಾಡಿದ್ದೇವೆ. ಇದರಿಂದ ರಾಜ್ಯದ ಜನರು ಖುಷಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ವಿರೋಧಪಕ್ಷಗಳನ್ನು ಸಮಾಧಾನಪಡಿಸುವುದು ಹೇಗೆ, ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದರು.
ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಾರೆ. ಎಲ್ಲ ಜಾತಿ, ಎಲ್ಲ ಧರ್ಮದ ಬಡವರಿಗೆ ಪ್ರಯೋಜನ ದೊರೆಯುತ್ತಿದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವೋದಯ ಸರ್ವರಲ್ಲೂ ಇರಬೇಕು. ಆದರೆ ಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಎಂದು ಹೇಳಿದರು. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು.

ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರವನ್ನು ಗಾಳಿಯಿಲ್ಲದೆ ಕೆಟ್ಟು ನಿಂತಿರುವ ಬಸ್‍ಗೆ ಹೋಲಿಸಿದ್ದಾರೆ. ಆದರೆ 2019 ರಿಂದ 2023 ರ ನಡುವಿನ ಅವರ ಸರ್ಕಾರ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸಾಗಿತ್ತು. ಮುಂದಕ್ಕೆ ಹೋಗಲಿಲ್ಲ. ಆ ಬಸ್ಸು ಮುಂದೆ ಹೋದರೆ ವಿಷದ ಹೊಗೆ ಉಗುಳುತ್ತದೆ ಎಂದು ಜನರ ಪಕ್ಕಕ್ಕೆ ತಳ್ಳಿದರು ಎಂದು ಲೇವಡಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೀವು 158 ಭರವಸೆಗಳನ್ನು ಈಡೇರಿಸಿದ್ದರೆ ಜನರು ಏಕೆ 2018 ರಲ್ಲಿ ನಿಮ್ಮನ್ನು ಪಕ್ಕಕ್ಕೆ ತಳ್ಳಿದರು? ಭರವಸೆಗಳ ಈಡೇರಿಕೆ ಕೇವಲ ಕಾಗದದ ಮೇಲಿತ್ತು ಎಂದು ತಿರುಗೇಟು ನೀಡಿದರು. ಉತ್ತರ ಮುಂದುವರೆಸಿದ ಸಿದ್ದರಾಮಯ್ಯ, ರಾಜ್ಯಸರ್ಕಾರ ಜಾರಿಗೆ ತಂದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಡಿ 160 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಫೆ.13 ರವರೆಗೆ 2,208 ಕೋಟಿ ಖರ್ಚಾಗಿದೆ. ಇದು ಸುಳ್ಳೆ ಎಂದು ಪ್ರಶ್ನಿಸಿದರು.ಆಗ ಆರ್.ಅಶೋಕ್‍ರವರು, ಜೆಸಿಬಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಿರುವುದು ಸುಳ್ಳೆ ಎಂದು ಮರುಪ್ರಶ್ನಿಸಿದರು.

 

Leave a Reply

Your email address will not be published. Required fields are marked *

error: Content is protected !!