ಉದಯವಾಹಿನಿ, ಬೆಂಗಳೂರು: 506.8 ಎಕರೆ ವಿಸ್ತೀರ್ಣದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಆವರಣದಲ್ಲಿ ಕಟ್ಟಡದ ಅವಶೇಷಗಳನ್ನು ಸುರಿಯುತ್ತಿರುವುದರಿಂದ ಹಲವು ಅಪಾಯಗಳಿಗೆ ಎಡೆಮಾಡಿಕೊಟ್ಟಿದೆ. ಸಿಸಿಟಿವಿ ಅಳವಡಿಸಿ ಕೆರೆಯ ಸುತ್ತ ಬೇಲಿ ಹಾಕುವ ಕಾಮಗಾರಿಯನ್ನು ಇಲಾಖೆ ಕೈಗೆತ್ತಿಕೊಳ್ಳಬೇಕು ಎಂದು ಆಕ್ರೋಶಗೊಂಡ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಹಿಂದೆ ಬಡಾವಣೆಗಳ ಕೊಳಚೆ ನೀರನ್ನು ನೇರವಾಗಿ ಕೆರೆಗೆ ಬಿಡುತ್ತಿರುವ ಬಗ್ಗೆ ವರದಿಯಾಗಿತ್ತು.
ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಣ್ಣ ಮಾತನಾಡಿ, ‘ಕೆರೆ ಆವರಣದಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದ್ದು, ಬೇಲಿ ಹಾಕುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ‘ಎರಡು ಪಂಚಾಯಿತಿಗಳು ಮತ್ತು ಬಿಬಿಎಂಪಿ ವ್ಯಾಪ್ತಿಯನ್ನು ಒಳಗೊಂಡಿರುವ ಕೆರೆಯ 10 ಕಿಮೀ ವ್ಯಾಪ್ತಿಯಲ್ಲಿ ಬೇಲಿ ಹಾಕುವ ಕಾರ್ಯವನ್ನು ಪೂರ್ಣಗೊಳಿಸಬೇಕು. ತಹಸೀಲ್ದಾರ್ ಆದೇಶ ಮತ್ತು ಸರ್ವೆ ಆಧರಿಸಿ 3 ಕಿ.ಮೀ ಬೇಲಿ ಹಾಕಲಾಗಿದೆ. ಇನ್ನೊಂದು ತಿಂಗಳಲ್ಲಿ ಇಲಾಖೆ ವತಿಯಿಂದ ಎಲ್ಲ ಬೇಲಿ ಹಾಕುವ ಕಾಮಗಾರಿ ಪೂರ್ಣಗೊಳಿಸಿ ಕೆರೆಯ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಇಲಾಖೆ ಕಾರ್ಯಪಾಲಕ ಅಭಿಯಂತರ ರವೀಂದ್ರನಾಥ್ ಮಾತನಾಡಿ, ಕೆರೆಯನ್ನು ಪುರಸಭೆಗೆ ಹಸ್ತಾಂತರಿಸಲು ಚಿಂತನೆ ನಡೆಸಲಾಗಿದ್ದು, ಜಲಾನಯನ ಪುನಶ್ಚೇತನಕ್ಕೆ ಸಾಕಷ್ಟು ಹಣ ದೊರೆಯಲಿದೆ ಎಂದರು.
