ಉದಯವಾಹಿನಿ, ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮ ಎದುರಾಗಿದೆ. ಒಂದೆಡೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‍ವೆಲ್‍ಗಳು ಬತ್ತಿಹೋಗುತ್ತಿದ್ದು ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹದೇವಪುರ, ಕೆ.ಆರ್.ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ 110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ಸರಿ ಸುಮಾರು 16 ವರ್ಷಗಳೇ ಕಳೆದಿವೆಯಾದರೂ ಇಲ್ಲಿ ವಾಸಿಸುವ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ಸರಬರಾಜಾಗುತ್ತಿಲ್ಲ.
ಇತ್ತ ಪಾಲಿಕೆಗೆ ಶೇ. 50 ರಷ್ಟು ಆದಾಯ ತಂದು ಕೊಡುವ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹನಿ ನೀರಿಗೂ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಐಟಿಬಿಟಿ ಕ್ಷೇತ್ರ ಅಂತಲೇ ಕರೆಸಿಕೊಳ್ಳುವ ಮಹದೇವಪುರ ಕ್ಷೇತ್ರದ ಪ್ರತಿ ವಾರ್ಡ್‍ಗಳಲ್ಲಿ ನೀರಿನ ಅಭಾವದಿಂದ ಜನ ಹೈರಾಣಾಗಿದ್ದಾರೆ. ಈ ಕ್ಷೇತ್ರಕ್ಕೊಳಪಡುವ ವರ್ತೂರು, ಹಗದೂರು ಮತ್ತಿತರ ವಾರ್ಡ್‍ಗಳಲ್ಲಿ ಬೋರ್‍ವೆಲ್‍ಗಳು ಬತ್ತಿ ಹೋಗಿವೆ. ಇಲ್ಲಿನ ಜನರು ದಿನನಿತ್ಯ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಿದೆ.
ಈ ಕ್ಷೇತ್ರದಲ್ಲಿ ಪ್ರತಿ ಮನೆಗೂ ಟ್ಯಾಂಕರ್ ನೀರೇ ಗತಿ. ತಿಂಗಳಲ್ಲಿ 4 ರಿಂದ 5 ಸಾವಿರ ಹಣ ನೀರಿಗೆ ಕೊಡಬೇಕು. ಒಂದು ವೇಳೆ ಟ್ಯಾಂಕರ್ ನೀರಿಗೆ ಬುಕ್ ಮಾಡಿದರೆ ಅದು ಬರೋದಕ್ಕೆ ಒಂದು ವಾರ ಬೇಕಂತೆ. ಅಂತ ಇಲ್ಲಿನ ಜನ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಹೆಸರಿಗೆ ಮಾತ್ರ ಮಹದೇವಪುರ ಅದರೆ ಇಲ್ಲಿ ಗಂಗೆಗಾಗಿ ಪ್ರತಿದಿನ ಪರದಾಡುವಂತಾಗಿರುವುದಂತೂ ಸತ್ಯ.
ಇನ್ನು ಕೆ.ಆರ್.ಪುರಂನಲ್ಲೂ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಕ್ಷೇತ್ರದ ದೇವಸಂದ್ರ ವಾರ್ಡ್‍ನ ಕತೆಯೇ ಬೇರೆ. ಈ ವಾರ್ಡ್‍ನ ಜನ ಪ್ರತಿನಿತ್ಯ ಕುಡಿಯುವ ನೀರಿಗೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿ ಮೊದಲು ವಾರಕ್ಕೆ ಎರಡು ದಿನ ನೀರು ಬಿಡ್ತಿದ್ದ ಬಿಬಿಎಂಪಿ ಈಗ ವಾರಕ್ಕೆ ಒಂದು ಬಾರಿ ಅದೂ ಅರ್ಧ ಗಂಟೆ ಮಾತ್ರ ನೀರು ಸರಬರಾಜು ಮಾಡ್ತಿದೆಯಂತೆ.
ವಾರಕ್ಕೊಮ್ಮೆ ನೀರು ಬಿಡುವುದರಿಂದ ಕೂಲಿ ಕೆಲಸ ಮಾಡುವ ಮಹಿಳೆಯರು ಕೆಲಸಕ್ಕೆ ರಜೆ ಹಾಕಿ ನೀರು ತುಂಬಿಕೊಳ್ಳಬೇಕು. ಇಲ್ಲದಿದ್ದರೆ ವಾರ ಪೂರ್ತಿ ಕುಡಿಯೋಕ್ಕೆ ನೀರು ಇಲ್ಲದೆ ಪರದಾಡಬೇಕು. ಕ್ಯಾನ್ ವಾಟರ್‍ಗೆ ಪ್ರತಿದಿನ 100 ರೂಪಾಯಿ ಖರ್ಚು ಮಾಡಬೇಕು.ಇನ್ನು ಬಟ್ಟೆ ಹೊಗೆಯಲು, ಸ್ನಾನಕ್ಕೆ, ಪಾತ್ರೆ ತೊಳೆಯೋದಕ್ಕೆ ಅಂತ ಟ್ಯಾಂಕರ್ ನೀರು ತಗೋಬೇಕು.ಇದಕ್ಕೆ ಮಂತ್ಲಿ ಮೂರರಿಂದ ನಾಲ್ಕು ಸಾವಿರ ರೂ. ತೆರಬೇಕು ಎಂದು ಇಲ್ಲಿನ ಜನ ತಮ್ಮ ಅಳಲು ತೋಡಿಕೊಂಡಿದ್ದಾರೆ.
