ಉದಯವಾಹಿನಿ, ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ರ್ಪಧಿಸಬೇಕು ಎಂಬ ಬಗ್ಗೆ ಒತ್ತಡವಿದ್ದು, ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮಂಜುನಾಥ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಒಳ್ಳೆಯ ಭಾವನೆ ಇದೆ. ಅವರು ಸಹ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ಲೋಕಸಭೆ ಚುನಾವಣೆಗೆ ಸ್ರ್ಪಧಿಸುವಂತೆ ಜನರು ಕೂಡ ಒತ್ತಡ ಹಾಕುತ್ತಿದ್ದಾರೆ ಎಂದರು.
ಮಂಜುನಾಥ್ ಅವರು ಚುನಾವಣೆಗೆ ಸ್ರ್ಪಧಿಸುವ ವಿಚಾರದಲ್ಲಿ ಬಹಿರಂಗವಾಗಿ ಇದುವರೆಗೂ ಏನನ್ನೂ ಹೇಳಿಲ್ಲ. ರಾಜಕೀಯ ಪ್ರವೇಶ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಸಮಯ ಬಂದಾಗ ಈ ಎಲ್ಲಾ ವಿಚಾರ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.ಫೆ.27ರಂದು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸದಸ್ಯ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್‍ನಿಂದ ಮಾಜಿ ಸಂಸದ ಕುಪೇಂದ್ರರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ಅವರಿಗೆ ಗೆಲುವು ತಂದುಕೊಡಬೇಕು ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗುತ್ತಿದೆ. ನಮ್ಮ ಆಸೆ ಈಡೇರಲಿದೆಯೇ ಎಂಬುದು ಅಂದು ಸಂಜೆ ಬಹಿರಂಗವಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ದೆಹಲಿ ಭೇಟಿ ಸಂದರ್ಭದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಅಮಿತ್ ಷಾ ಅವರು ಸಹ ಹಲವು ಸಲಹೆ- ಸೂಚನೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!