ಉದಯವಾಹಿನಿ, ಬೀದರ್: ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ತಂದೆ-ತಾಯಿ ಪೂಜೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಪಾಲಕರ ಪಾದಪೂಜೆ ಮಾಡಿದರು.
1 ರಿಂದ 10ನೇ ತರಗತಿ ವರೆಗಿನ ಮಕ್ಕಳು ತಂದೆ-ತಾಯಿ ಪಾದಕ್ಕೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ಆಶೀರ್ವಾದ ಪಡೆದರು.
‘ಅಮ್ಮಾ ಊರೇನೇ ಅಂದರೂ ನೀ ನನ್ನ ದೇವರು…’, ‘ಅಮ್ಮಾ ಐ ಲವ್ ಯು…’ ಹಾಡುಗಳ ತಾಳಕ್ಕೆ ತಕ್ಕಂತೆ ಮಕ್ಕಳು ಪ್ರದರ್ಶಿಸಿದ ನೃತ್ಯ ಸಭಿಕರನ್ನು ಮಂತ್ರಮುಗ್ಧಗೊಳಿಸಿತು.
ಸಂಸ್ಕಾರಯುತ ಶಿಕ್ಷಣ ಅಗತ್ಯ: ಉದ್ಘಾಟನೆ ನೆರವೇರಿಸಿದ ವಿಶ್ವ ಹಿಂದೂ ಪರಿಷತ್ತಿನ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ ಅವರು, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ
ಬಹಳ ಅಗತ್ಯವಾಗಿದೆ ಎಂದು ಹೇಳಿದರು. ಮಕ್ಕಳು ಪಾಲಕರು, ಗುರು ಹಾಗೂ ಹಿರಿಯರನ್ನು ಸದಾ ಗೌರವಿಸಬೇಕು ಎಂದು ಸಲಹೆ ಮಾಡಿದರು.
ಅರುಣೋದಯ ಶಾಲೆಯು ಶಿಕ್ಷಣದ ಜತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನೂ ಬೆಳೆಸಲು ಶ್ರಮಿಸುತ್ತಿದೆ ಎಂದು ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ತಿಳಿಸಿದರು.
ವೇದಾಂತ ಯೋಗ ಸೇವಾ ಸಮಿತಿಯ ಅಧ್ಯಕ್ಷ ಸಂಜೀವಕುಮಾರ ಪಾಟೀಲ, ಕಾರ್ಯದರ್ಶಿ ಡಾ. ಸುರೇಂದ್ರ, ಸದಸ್ಯ ಶರಣು ಬಿರಾದಾರ, ಸುನೀಲ್ ಗೌಳಿ, ಮುಖ್ಯಶಿಕ್ಷಕರಾದ ಈಶ್ವರಿ ಬೇಲೂರೆ, ಶಿಕ್ಷಕರಾದ ನೀಲಮ್ಮ, ಸಾರಿಕಾ, ಮಾರುತೆಪ್ಪ, ಪಲ್ಲವಿ, ಸುಮೀತ್, ಜ್ಯೋತಿ, ಪೂಜಾರಾಣಿ, ಶೈಲಜಾ, ಸುಜಾತಾ, ಭಾಗ್ಯಶ್ರೀ, ಪೂಜಾ, ಚಂದ್ರಕಲಾ, ಸುನೀತಾ ಇದ್ದರು.
ಶಿಕ್ಷಕಿ ಅಲ್ಕಾವತಿ ಎಚ್. ನಿರೂಪಿಸಿದರು.
