ಉದಯವಾಹಿನಿ, ಬೆಂಗಳೂರು: ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ತನ್ನ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವುದರ ಜೊತೆಗೆ ಜೆಡಿಎಸ್‍ನ 5 ನೇ ಅಭ್ಯರ್ಥಿ ಗೆಲುವಿಗೆ ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಅಡ್ಡಮತದಾನದ ಭೀತಿ ಎದುರಾಗಿದೆ. ಕಾಂಗ್ರೆಸ್‍ನಲ್ಲಿ ಅಸಮಾಧಾನಗೊಂಡಿರುವ ಕೆಲವು ಶಾಸಕರ ಮೂಲಕ ಅಡ್ಡಮತದಾನ ಮಾಡಿಸಿ ಜೆಡಿಎಸ್ ಬೆಂಬಲಿತ ಕುಪೇಂದ್ರ ರೆಡ್ಡಿಯವರನ್ನು ಗೆಲ್ಲಿಸಲು ಮುಂದಾಗಿದ್ದ ಬಿಜೆಪಿಗೆ ತನ್ನ ಕಾರ್ಯತಂತ್ರವೇ ತಿರುಗುಬಾಣವಾಗುವ ಸಾಧ್ಯತೆ ಇದೆ.

ಬಿಜೆಪಿಯಲ್ಲಿ ಇದ್ದರೂ ಕಾಂಗ್ರೆಸ್ ಜೊತೆ ಒಡನಾಟವಿಟ್ಟುಕೊಂಡಿರುವ ಬೆಂಗಳೂರು ನಗರದ ಯಶವಂತಪುರ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಶಾಸಕ ಅರೆಬೈಲು ಶಿವರಾಂ ಹೆಬ್ಬಾರ್ ಮೇಲೆ ಅನುಮಾನದ ಶಂಕೆ ವ್ಯಕ್ತವಾಗಿದೆ. ಈ ಇಬ್ಬರೂ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದು, ರಾಜ್ಯಸಭಾ ಚುನಾವಣೆ ವೇಳೆ ಪಕ್ಷದ ಅಧಿಕೃತ ಅಭ್ಯರ್ಥಿ ಬದಲಿಗೆ ಕೈ ಅಭ್ಯರ್ಥಿಗೆ ಮತ ಹಾಕಬಹುದೆಂಬ ಅನುಮಾನ ಬಿಜೆಪಿ ವಲಯದಲ್ಲೇ ಕಾಡುತ್ತಿದೆ. ಹೀಗಾಗಿ ಈ ಇಬ್ಬರ ಚಲನವಲನದ ಮೇಲೆ ಬಿಜೆಪಿ ಹದ್ದಿನ ಕಣ್ಣಿಟ್ಟಿದ್ದು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವಾಗಿ ಮತ ಚಲಾಯಿಸದಂತೆ ಕೊನೆ ಕ್ಷಣದವರೆಗೂ ಮನವೊಲಿಸುವ ಕಸರತ್ತು ನಡೆಸುತ್ತಿದೆ.

ಬಿಜೆಪಿ ಅದಿಕೃತ ಅಭ್ಯರ್ಥಿ ನಾರಾಯಣ ಸ ಭಾಂಡಗೆ 46 ಮತಗಳನ್ನು ನಿಗದಿಪಡಿಸಿರುವ ಬಿಜೆಪಿ ಉಳಿಯಲಿರುವ ಹೆಚ್ಚುವರಿ 20 ಮತಗಳನ್ನು ಜೆಡಿಎಸ್‍ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ವರ್ಗಾವಣೆ ಮಾಡಲಿದೆ. ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಿಲ್ಲ ಎಂದು ಪರೋಕ್ಷವಾಗಿ ಪಕ್ಷದ ನಾಯಕರಿಗೆ ತಮ್ಮ ತೀರ್ಮಾನವನ್ನು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿ ಮತದಾನದ ವೇಳೆ ಒಟ್ಟು 3 ತಂಡಗಳನ್ನು ರಚನೆ ಮಾಡಿದೆ. ಬೆಳಿಗ್ಗೆ 8 ಗಂಟೆಗೆ ಎಲ್ಲಾ ಶಾಸಕರು ಕಡ್ಡಾಯವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್‍ರವರ ಕೊಠಡಿಗೆ ಆಗಮಿಸಿ ಅಲ್ಲಿಯೇ ಬೆಳಗಿನ ಉಪಾಹಾರ ಸೇವಿಸುವಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!