ಉದಯವಾಹಿನಿ, ಬೆಂಗಳೂರು: ಮಳೆ ಕೊರತೆಯಿಂದಾಗಿ ಒಂದೆಡೆ ಭೀಕರ ಬರ ಪರಿಸ್ಥಿತಿ ಇದ್ದರೆ ಮತ್ತೊಂದೆಡೆ ಬೇಸಿಗೆ ಆರಂಭಕ್ಕೂ ಮುನ್ನ ಎದುರಾಗಿರುವ ಜಲಕ್ಷಾಮ ಆತಂಕ ಮೂಡಿಸಿದೆ. ಮಹಾನಗರಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬಯಲುಸೀಮೆಯಲ್ಲಷ್ಟೇ ಅಲ್ಲದೆ ಕರಾವಳಿ, ಮಲೆನಾಡು ಭಾಗದಲ್ಲೂ ನೀರಿನ ಕೊರತೆ ವರದಿಯಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
ಕಳೆದ ಜನವರಿಯಲ್ಲಿ ಸುಮಾರು 2000 ಗ್ರಾಮಗಳಲ್ಲಿ ನೀರಿನ ಕೊರತೆಯಾಗಲಿದೆ ಎಂಬ ಮುನ್ಸೂಚನಾ ವರದಿ ಇತ್ತು. ಅಂತರ್ಜಲಮಟ್ಟ ಕುಸಿತದಿಂದಾಗಿ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಹೊಸ ನೀರಿನ ಸೆಲೆ ಹಾಗೂ ಮೂಲಗಳ ಶೋಧ, ಬೋರ್‍ವೆಲ್‍ಗಳನ್ನು ಕೊರೆಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಪಂಚಖಾತ್ರಿ ಯೋಜನೆಗಳ ಜೊತೆಗೆ ಬರದಿಂದ ಎದುರಾಗಿರುವ ಹೆಚ್ಚುವರಿ ಆರ್ಥಿಕ ಹೊರೆ ಸರ್ಕಾರವನ್ನು ಹೈರಾಣು ಮಾಡಿದೆ. ಇನ್ನು ಫೆಬ್ರವರಿ ತಿಂಗಳಿನಲ್ಲೇ ಬಿಸಿಲ ಧಗೆ ತೀವ್ರಗೊಳ್ಳುತ್ತಿದೆ. ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿ ಅಪಾಟ್‍ಮೆಂಟ್‍ಗಳ ಜನ ಕೂಡ ಬಿಂದಿಗೆ ಹಿಡಿದು ಸಾರ್ವಜನಿಕ ನಲ್ಲಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಕಾವೇರಿ ನೀರಾವರಿ ನೀರು ನಿಯಂತ್ರಣ ಸಮಿತಿ ಹಾಗೂ ನೀರು ನಿರ್ವಹಣಾ ಮಂಡಳಿಗಳ ಆದೇಶಗಳ ಅನುಸಾರ ತಮಿಳುನಾಡಿಗೆ ಪದೇ ಪದೇ ಕಾವೇರಿ ನೀರು ಹರಿಸಲಾಗಿತ್ತು.
ಪರಿಣಾಮ ಪ್ರಸ್ತುತ ಕೆಆರ್‍ಎಸ್‍ನಲ್ಲಿ 16.32 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಗೆ 3ಂ.67 ನೀರಿನ ಸಂಗ್ರಹವಿತ್ತು . ಪ್ರಸ್ತುತ ಜಲಾಶಯದ ಒಟ್ಟು ಸಾಮಥ್ರ್ಯದಲ್ಲಿ ಶೇ.33ರಷ್ಟು ಮಾತ್ರ ನೀರಿದೆ.
ಬೆಂಗಳೂರಿನ ಕುಡಿಯುವ ನೀರಿಗಾಗಿ 19 ಟಿಎಂಸಿಯನ್ನು ಕಾಯ್ದಿರಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಜಲಾಶಯದಲ್ಲಿ ಸಂಗ್ರಹ ಇರುವುದೇ 16 ಟಿಎಂಸಿ ಆಗಿರುವುದರಿಂದ ಇನ್ನು ಮೂರು ಟಿಎಂಸಿ ಕೊರತೆ ಕಂಡುಬಂದಿದೆ.
