ಉದಯವಾಹಿನಿ, ಬೆಂಗಳೂರು: ಮಾಜಿ ಸಚಿವ, ಗಂಗಾವತಿ ಶಾಸಕ ಜನಾದರ್ನ ರೆಡ್ಡಿ ಅವರನ್ನು ಪುನಃ ಬಿಜೆಪಿಗೆ ಕರೆತರುವ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿವೆ. ಮಾಜಿ ಸಚಿವ ಶ್ರೀರಾಮುಲು ತಮ್ಮ ಆಪ್ತ ಸ್ನೇಹಿತನನ್ನು ಮರಳಿ ಮನೆಗೆ ಕರೆತರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಈ ವಿಚಾರವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆಯೂ ಮಾತುಕತೆ ನಡೆಸಿದ್ದಾರೆ.
ಜನಾರ್ದನ ರೆಡ್ಡಿ ಬಿಜೆಪಿಗೆ ಬಂದರೆ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ. ಆದರೆ, ಜನಾರ್ದನ ರೆಡ್ಡಿ ನಡೆ ಇನ್ನು ನಿಗೂಢವಾಗಿದೆ. ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ ಜನಾರ್ಧನ ರೆಡ್ಡಿ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ರ್ಪಧಿಸಿ ಗೆದ್ದಿರುವುದರ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದಾರೆ. ಈ ಹಿನ್ನೆಲೆ ಲೋಕಸಭಾ ಚುನಾವಣೆಯಲ್ಲೂ ಜನಾಧರ್ನ ರೆಡ್ಡಿ ಪ್ರಭಾವ ಬೀರಿದರೆ ಕಷ್ಟವಾಗುತ್ತದೆ ಎಂದು ಜನಾರ್ಧನ ರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಲೇ ಇವೆ.
ಕೆಲ ದಿನಗಳ ಹಿಂದಷ್ಟೇ ಶ್ರೀರಾಮುಲು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಆಗ ಜನಾರ್ಧನ ರೆಡ್ಡಿ ಬಗ್ಗೆ ಚರ್ಚೆಯಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಜನಾರ್ಧನ ರೆಡ್ಡಿ ಜನಪ್ರಿಯ ನಾಯಕ. ಅವರು ಪಕ್ಷಕ್ಕೆ ವಾಪಸ್ ಬಂದರೆ ಬಿಜೆಪಿಗೆ ಬಲ ಬರಲಿದೆ. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮೈಸೂರಿಗೆ ಅಮಿತ್ ಶಾ ಆಗಮಿಸಿದಾಗಲೂ ಜನಾರ್ಧನ ರೆಡ್ಡಿ ಬಗ್ಗೆ ಚರ್ಚೆಯಾಗಿದೆ. ಶ್ರೀರಾಮುಲು ಅವರು ಪ್ರತಿ ಅವಕಾಶದಲ್ಲೂ ತಮ್ಮ ಆಪ್ತ ಸ್ನೇಹಿತನನ್ನು ಮರಳಿ ಪಕ್ಷಕ್ಕೆ ಕರೆತರಲು ಶ್ರಮಪಡುತ್ತಿರುವುದು ಕಂಡುಬರುತ್ತಿದೆ.
