ಉದಯವಾಹಿನಿ, ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟಕ ಪ್ರಕರಣವನ್ನು ತನಿಖೆ ನಡೆಸಲು ನಮ್ಮ ಪೊಲೀಸ್ ಅಧಿಕಾರಿಗಳೇ ಸಮರ್ಥರಿದ್ದಾರೆ ಎಂದು ಹೇಳುವ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ರಾಷ್ಟ್ರೀಯ ಸಂಸ್ಥೆಗಳ ತನಿಖೆಗೆ ವಹಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಎಫ್‍ಎಸ್‍ಎಲ್ ಪ್ರಯೋಗಾಲಯ ಸಮರ್ಥ ಹಾಗೂ ಅತ್ಯಾಧುನಿಕವಾಗಿದೆ. ನಿನ್ನೆ ಘಟನೆ ನಡೆದ ತಕ್ಷಣ ತಜ್ಞರ ದೊಡ್ಡ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ಬಾಂಬ್‍ನಲ್ಲಿ ಟೈಮರ್ ಅಳವಡಿಸಿರುವುದು, ಯಾವ ರೀತಿಯ ಸ್ಪೋಟಕ ಬಳಸಲಾಗಿದೆ, ಬಾಂಬ್ ಸಾಮಥ್ರ್ಯ ಎಷ್ಟು ಎಂಬೆಲ್ಲಾ ವಿವರಗಳನ್ನೂ ಕಲೆ ಹಾಕಿಕೊಂಡಿದ್ದಾರೆ. ಇದೂ ಕೂಡ ತನಿಖೆಗೆ ಸಹಾಯವಾಗಲಿದೆ ಎಂದರು.

ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಾಂಬ್ ಸ್ಪೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಅನೇಕ ತಂಡಗಳನ್ನು ರಚನೆ ಮಾಡಲಾಗಿದೆ. ತನಿಖೆ ಆಳವಾಗಿ ನಡೆಯುತ್ತಿದೆ. ಕೆಲ ಕುರುಹುಗಳು ಸಿಕ್ಕಿವೆ. ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ರಾಮೇಶ್ವರಂ ಕೆಫೆ ಮಾರ್ಗದಲ್ಲಿ ನಿನ್ನೆ 26 ಬಸ್‍ಗಳು ಸಂಚರಿಸಿವೆ. ಅವುಗಳಲ್ಲೂ ಸಿಸಿಟಿವಿ ಕ್ಯಾಮರಾ ಇದೆ. ಅದರಲ್ಲಿ ಪ್ರಯಾಣಿಕರ ದೃಶ್ಯಗಳು ಸಂಗ್ರಹವಾಗಿರುತ್ತವೆ. ಬಿಎಂಟಿಸಿ ಸಹಕಾರದೊಂದಿಗೆ ಅದನ್ನೂ ಪರಿಶೀಲಿಸಲಾಗುತ್ತಿದೆ. ಆರೋಪಿ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದಾನೆ. ಎಲ್ಲಿ ಇಳಿದಿದ್ದಾನೆ. ಬಸ್‍ನಲ್ಲಿ ಆತನ ನಡವಳಿಕೆ ಹೇಗಿತ್ತು. ಈ ಹಿಂದೆ ಎಲ್ಲಿಂದ ಬಂದಿದ್ದನು ಎಂಬೆಲ್ಲಾ ಮಾಹಿತಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!