ಉದಯವಾಹಿನಿ, ಕೆ.ಆರ್.ಪೇಟೆ.: ವಿವಿಧ ರೀತಿಯ ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಸಮಾಜದಲ್ಲಿ ಆರ್ಥಿಕ ಸ್ವಾವಲಂಭನೆ ಸಾಧಿಸಿ ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 2023-24 ನೇ ಸಾಲಿನ ಗ್ರಾಮೀಣ ಕೈಗಾರಿಕಾ ಇಲಾಖೆ ಜಿಲ್ಲಾಪಂಚಾಯತ್ ಮಂಡ್ಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳ ಸರಬರಾಜು ಯೋಜನೆಯಡಿ ವಿವಿಧ ರೀತಿಯ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರುಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅವರು ಕೈಗೊಳ್ಳುವ ಕಸುಬುಗಳಿಗೆ ಸಂಬಂಧಿಸಿದ ಸಾಧನಸಲಕರಣೆಗಳನ್ನು ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಮಾಡಲಾಗುತ್ತಿದೆ.
2023-24 ನೇ ಸಾಲಿನಲ್ಲಿ 76 ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆಯಂತ್ರಗಳು ,13 ಫಲಾನುಭವಿಗಳಿಗೆ ಗಾರೆಕೆಲಸ, ಕ್ಷೌರಿಕ, ದೋಭಿ, ಮರಗೆಲಸ ಮಾಡಲು ಅನುಕೂಲವಾಗುವ ಉಪಕರಣಗಳನ್ನು ವಿತರಿಸಲಾಗುತ್ತಿದ್ದು ಇವುಗಳನ್ನು ಬಳಸಿಕೊಂಡು ಸ್ವಾಭಿಮಾನದಿಂದ ಶ್ರಮವಹಿಸಿ ಕೆಲಸ ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಮುಂದಿನ ವರ್ಷವೂ ಸವಲತ್ತುಗಳನ್ನು ವಿತರಿಸಲು ಕ್ರಮವಹಿಸಲಾಗುತ್ತದೆ. ಹಣಕಾಸಿನ ತೊಂದರೆಯಿಂದ ನೀವು ಕೈಗೊಳ್ಳಲು ಉದ್ದೇಶಿಸಿರುವ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗದಿದ್ದವರಿಗೆ ಈ ಉಪಕರಣಗಳು ಸಹಾಯವಾಗಲಿದ್ದು ಇವುಗಳ ಮೂಲಕ ಆಸಕ್ತಿಯಿಂದ ಕೆಲಸ ನಿರ್ವಹಿಸಿ ನಿಮ್ಮೆಲ್ಲರಿಗೂ ಉತ್ತಮ ಆದಾಯ ದೊರೆಯಲಿ, ನಿಮ್ಮ ಬದುಕು ಬಂಗಾರವಾಗಲಿ ಎಂದು ಶುಭಕೋರಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕೈಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಶೈಲಜ,, ತಾ.ಪಂ ಇ.ಒ ಸತೀಶ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಫಲಾನುಭವಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!