ಉದಯವಾಹಿನಿ, ಬೆಂಗಳೂರು : ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಮಹಮ್ಮದ್ ಶಫಿ ನಾಶಿಪುಡಿ, ಮುನ್ನಾವರ ಅಹಮದ್, ಮಹಮ್ಮದ್ ಇಲ್ತಾಜ್ ಎಂಬುವವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂದಿಸಿ ಕೋರಮಂಗಲದ 39ನೇ ಎಸಿಎಂಎಂ ನ್ಯಾಯಾದೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಾದೀಶರು ಆರೋಪಿಗಳನ್ನು ಮಾ.6ರವರೆಗೆ ಪೊಲೀಸರ ಕಸ್ಟಡಿಗೆ ನೀಡಿದರು.
ಈ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪೂರ್ವಪರ ಪರಿಶೀಲನೆ ಪಾಕ್ ಪರ ಘೋಷಣೆ ಹಿಂದಿನ ಉದ್ದೇಶ ಏನಾಗಿತ್ತು ಇದಕ್ಕೆ ಯಾರಾದರೂ ಕುಮ್ಮಕ್ಕು ನೀಡಿದ್ದಾರಾ, ಇದು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಬಂಧಿತರ ಮೂವರ ಮೊಬೈಲ್‍ಗಳನ್ನು ವಶಕ್ಕೆ ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಎಪ್‍ಎಸ್‍ಎಲ್ ವರದಿಯಲ್ಲಿ ದೃಡಪಡುತ್ತಿದ್ದಂತೆ ವಿಧಾನಸೌಧ ಪೊಲೀಸರು 40ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ 15 ಮಂದಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದರು. ನಿನ್ನೆ ಮಧ್ಯಾಹ್ನ ಪೊಲೀಸರ ಕೈಗೆ ಎಪ್‍ಎಸ್‍ಎಲ್ ವರದಿ ಸಿಗುತ್ತಿದ್ದಂತೆ ಘೋಷಣೆ ಕೂಗಿದ ಮೂವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
