ಉದಯವಾಹಿನಿ, ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಜ್ಞಾನದ ವಿಕಾಸವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ನಮ್ಮ ಶಾಲೆ ನಮ್ಮ ಜವಾಬ್ದಾರಿ – ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ಪೀಠಿಕೆ ಹೇಳಿದ ಮಕ್ಕಳು : ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಕಲಿತ ಸಿದ್ದರಾಮನಹುಂಡಿ ಹಾಗೂ ಕುಪ್ಪೆಗಾಲ ಸರ್ಕಾರಿ ಶಾಲೆಯ ಮಕ್ಕ ಳೊಡನೆ ಮುಖ್ಯಮಂತ್ರಿಗಳು ಸಂವಾದ ನಡೆಸಿದರು. ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದ ಮುಖ್ಯ ಮಂತ್ರಿಗಳು, ಸಂವಿಧಾನ ಏನು ಹೇಳುತ್ತದೆ ಹೇಳಿ ನೋಡೋಣ ಮಕ್ಕಳನ್ನು ಕೇಳಿದಾಗ, ಮಕ್ಕಳು ಸಂವಿಧಾನದ ಪೂರ್ಣ ಪೀಠಿಕೆಯನ್ನು ಹೇಳಿದರು. ಕೇವಲ ಕಂಠಪಾಠ ಮಾಡಿದರೆ ಸಾಲದು, ಅದರ ತಿರುಳನ್ನು ಅರಿತು ಅದರಂತೆ ನಡೆಯಬೇಕು ಎಂದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ತಿರುಳು. ಸಮಾನತೆ ಸಮಸಮಾಜ ನಿರ್ಮಾಣ ವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್‍ಅವರು ಇದನ್ನೇ ಹೇಳಿಕೊಂಡು ಬಂದಿದ್ದರಾದರೂ ಇದು ಪೂರ್ಣವಾಗಿ ಹೋಗಿಲ್ಲ. ಇದೆಲ್ಲ ಓದಿ ಅರ್ಥ ಮಾಡಿಕೊಂಡು ಮಕ್ಕಳು ಮನುಷ್ಯತ್ವ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಮಕ್ಕಳಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯ ಅಭಿವೃದ್ಧಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಸಂವಿಧಾನ ಜಾರಿಗೆ ಬಂದ ನಂತರ ಉಚಿತ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ಕಡ್ಡಾಯವಾಗಿದೆ ಎಂದು ಮುಖ್ಯ ಮಂತ್ರಿಗಳು ಮಕ್ಕಳಿಗೆ ತಿಳಿಹೇಳಿದರು. ಶಾಲೆಗಳಲ್ಲಿ ಮೊಟ್ಟೆ, ಹಾಲು ಕೊಡುತ್ತಿದ್ದಾರೆಯೇ, ವಾರದಲ್ಲಿ ಎಷ್ಟು ದಿನ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದಾಗ ಉತ್ತರಿಸಿದ ಮಕ್ಕಳು, ಕೊಡುತ್ತಿದ್ದಾರೆ. ವಾರದಲ್ಲಿ ಮೂರು ದಿನ ನೀಡಲಾಗುತ್ತಿದೆ ಎಂದರು.
