ಉದಯವಾಹಿನಿ, ಬೆಳಗಾವಿ: ಮಾಧ್ಯಮಗಳಲ್ಲಿ ಪಾಕಿಸ್ತಾನ ಪರ ಘೋಷಣೆ ಸ್ಪಷ್ಟವಾಗಿತ್ತು. ಆದರೂ ಆ ಸಂದರ್ಭದಲ್ಲಿ ಸಚಿವರು ದೇಶ ದ್ರೋಹಿಗಳ ರಕ್ಷಣೆಗೆ ನಿಂತಿದ್ದರು. ಜವಾಬ್ದಾರಿ ಮರೆತುದೇಶದ್ರೋಹಿಗಳ ಪರ ನಿಂತಿದ್ದು ದುರ್ದೈವ. ದೇಶದ್ರೋಹಿಗಳಿಗಿಂತ ಇವರ ನಡೆಯೇ ಆತಂಕಕ್ಕೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ ಸಂಬಂಧ ಎಫ್‍ಎಸ್‍ಎಲ್ ವರದಿ ಬಂದು ನಾಲ್ಕು ದಿನ ಕಳೆದಿದೆ. ಎರಡು ದಿನಗಳ ಹಿಂದೆ ಎನ್‍ಐಎ ಎಫ್‍ಐಆರ್ ಮಾಡಿಕೊಂಡಿದಕ್ಕೆ ಮೂವರ ಬಂಧನವಾಗಿದೆ. ಆದರೆ ಸರ್ಕಾರ ಮಾತ್ರ ಈಗಲೂ ಹೊಣೆಗೇಡಿತನದ ಹೇಳಿಕೆ ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಧ್ಯಮಗಳೇ ಇದನ್ನು ಪ್ರಚೋದಿಸುತ್ತೇವೆ ಎಂದು ಕಾಂಗ್ರೆಸ್ ದೂರಿದೆ. ಪತ್ರಕರ್ತರನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಈಗ ಎಫ್‍ಎಸ್‍ಎಲ್ ವರದಿ ಪಾಕ್ ಪರ ಘೋಷಣೆ ಕೂಗಿರುವುದು ನಿಜ ಎಂದು ಸ್ಪಷ್ಟಪಡಿಸಿದೆ. ಪಾಕ್ ಪರ ಘೋಷಣೆ ಕೂಗಿದವರ ಸಮರ್ಥನೆ ಮಾಡಿಕೊಂಡವರು ಈಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅಮ್ಮಾಜೇಶ್ವರಿ ಏತನೀರಾವರಿ ಯೋಜನೆಗೆ ಎರಡನೇ ಬಾರಿಗೆ ಶಂಕುಸ್ಥಾಪನೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬೊಮ್ಮಾಯಿ, ಸರ್ಕಾರ ಬಂದು 9 ತಿಂಗಳು ಕಳೆದರೂ ಯಾವುದೇ ಹೊಸ ಯೋಜನೆ ರೂಪಿಸಿಲ್ಲ. ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಮಾಡಿದೆ. ಹಳೆಯ ಯೋಜನೆ ಮತ್ತೆ ಚಾಲನೆ ನೀಡುತ್ತಿದ್ದಾರೆ. ಅಧಿಕಾರಿಗಳು ಮಿಸ್ ಗೈಡ್ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಇದರ ಪರಿಶೀಲನೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಬೆಳಗಾವಿಗೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮನ ಹಿನ್ನೆಲೆ ಬೆಳಗಾವಿಯಲ್ಲೇ ಬಿಜೆಪಿ- ಜೆಡಿಎಸ್ ಮೈತ್ರಿಯ ಸೀಟು ಹಂಚಿಕೆ ಬಗ್ಗೆ ಚರ್ಚೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಬೆಳಗಾವಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ದೆಹಲಿಯಲ್ಲಿ ಆಗಲಿದೆ ಎಂದರು. ಇದೇ ವೇಳೆ ಹಾವೇರಿಯಿಂದ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ನಾನು ಈಗಾಗಲೇ ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!