ಉದಯವಾಹಿನಿ, ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ಎಫ್‍ಎಸ್‍ಎಲ್ ವರದಿಯಲ್ಲಿ ಖಚಿತವಾದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರ ಸಂದರ್ಭೋಚಿತವಾಗಿ ನಡೆದುಕೊಂಡಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ನಿಜ. ಆದರೆ ಯಾರು ಕೂಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅದರ ಕುರಿತಂತೆ ತನಿಖೆ ನಡೆಯುತ್ತಿದೆ. ಮೂವರು ಆರೋಪಿಗಳನ್ನು ನಿನ್ನೆ ನ್ಯಾಯಾೀಧಿಶರ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದುಕೊಂಡಿದ್ದೇವೆ. ಇಷ್ಟೇ ಜನ ಇದ್ದಾರೆಯೇ ಅಥವಾ ಬೇರೆಯವರು ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತೇವೆ ಎಂದರು.

ಎಫ್‍ಎಸ್‍ಎಲ್ ವರದಿಯನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿರುವುದರಿಂದ, ವರದಿಯನ್ನು ಬಹಿರಂಗಪಡಿಸುವ ಅಗತ್ಯ ಏನಿದೆ. ನಾನೇ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. ಅದನ್ನು ಖಚಿತಪಡಿಸಿಕೊಂಡ ಬಳಿಕವೇ ನಾವು ಕ್ರಮ ಕೈಗೊಂಡಿದ್ದೇವೆ. ವಿರೋಧಪಕ್ಷಗಳು ಹೇಳಿದಾಕ್ಷಣ ಸಾಕ್ಷ್ಯ ಆಧಾರವಿಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪುನರ್ ಉಚ್ಚರಿಸಿದರು.ಘಟನೆಗೆ ಸಂಬಂಧಪಟ್ಟಂತೆ ಗೃಹಸಚಿವನಾಗಿ ನಾನು ಅಥವಾ ನಮ್ಮ ಇಲಾಖೆಯ ಡಿಜಿಪಿ, ಪೊಲೀಸ್ ಆಯುಕ್ತರು ನೀಡುವ ಹೇಳಿಕೆಗಳು ಮಾತ್ರ ಅಧಿಕೃತ. ಉಳಿದಂತೆ ಬೇರೆಯವರಿಗೆ ಹೆಚ್ಚಿನ ಮಾಹಿತಿಗಳು ಇರುವುದಿಲ್ಲ. ಅವರು ಏನೇ ಹೇಳಿದರೂ ಅದು ವೈಯಕ್ತಿಕ ಅಭಿಪ್ರಾಯಗಳು ಮಾತ್ರ ಎಂದರು. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿಯವರು ಹೇಳಿದಂತೆಲ್ಲಾ ಕ್ರಮ ಕೈಗೊಳ್ಳಲಾಗುವುದಿಲ್ಲ. ರಾಜ್ಯದಲ್ಲಿ ಕಾನೂನು ನಿಯಮಗಳು ಅಸ್ತಿತ್ವದಲ್ಲಿವೆ ಎಂದರು. ಈ ಘಟನೆಯಲ್ಲಿ ಸರ್ಕಾರಕ್ಕೆ ಯಾವುದೇ ಮುಜುಗರವಾಗಿಲ್ಲ. ಪಾಕ್ ಪರ ಘೋಷಣೆ ಕೂಗಲು ಸರ್ಕಾರವೇನು ಪ್ರಾಯೋಜಕತ್ವ ನೀಡಿರಲಿಲ್ಲ. ಘೋಷಣೆ ಖಚಿತವಾಗಬೇಕೆಂದು ಕಾಯುತ್ತಿದ್ದೆವು. ಈಗ ಖಚಿತವಾಗಿದೆ. ಆರೋಪಿಗಳನ್ನು ಬಂಧಿಸಿದ್ದೇವೆ. ಇದಕ್ಕಾಗಿ ಸರ್ಕಾರವನ್ನು ಪ್ರಶಂಸಿಸಬೇಕು. ನಾವು ಒಳ್ಳೆಯ ಕೆಲಸ ಮಾಡಿದ್ದೇವೆ. ಯಾವುದೇ ಮುಲಾಜಿಲ್ಲದೇ ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!