ಉದಯವಾಹಿನಿ, ಬೆಂಗಳೂರು: ಎಲ್ಲಾ ವರ್ಗದವರಿಗೂ ಸಹಕಾರವಾಗಿ ನಿಂತಿರುವ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ೧೦೩ ವರ್ಷಗಳನ್ನು ಪೂರೈಸಿ ಇದೀಗ ಶತಮಾನದ ಸಂಭ್ರಮಾಚರಣೆಯನ್ನು ನಡೆಸಲು ಸಜ್ಜಾಗಿದೆ. ಮಾ.೧೦ ಭಾನುವಾರದಂದು ಬೆಳಿಗ್ಗೆ, ೧೦ ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಶತಮಾನೋತ್ಸವ ಸಂಭ್ರಮವನ್ನು ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ರಮೇಶ್. ಬಿ ತಿಳಿಸಿದರು.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೂರು ವರ್ಷಗಳಿಂದಲೂ ಗ್ರಾಹಕರ ನಂಬಿಕೆ ಗಳಿಸಿ ಲಾಭದಾಯಕ ಹಾದಿಯಲ್ಲಿ ಸಾಗಿರುವ ಮೂಲಕ ದಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ವಿಶಿಷ್ಟ ಸಾಧನೆ ಮೆರೆದಿದೆ. ೧೯೨೦ರ ಜೂನ್ ೨೦ರಂದು ಆರಂಭವಾದ ಈ ಬ್ಯಾಂಕ್ ಶತಮಾನಗಳ ಕಾಲ ಗ್ರಾಹಕರ ಸೇವೆಯಲ್ಲಿ ಸೈ ಎನಿಸಿಕೊಂಡು ಯಶಸ್ಸಿನ ಹೆಜ್ಜೆ ಹಾಕುತ್ತಿದೆ. ಆರಂಭದ ದಿನಗಳನ್ನು ತಿರುಗಿ ನೋಡಿದರೆ ಬ್ಯಾಂಕ್ ಬೆಳೆದ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಮಲ್ಲೇಶ್ವರಂನ ೭ನೇ ಅಡ್ಡರಸ್ತೆಯಲ್ಲಿನ ಚಿಕ್ಕ ರೂಮ್ ಒಂದರಲ್ಲಿ ಬ್ಯಾಂಕ್ ವ್ಯವಹಾರ ಪ್ರಾರಂಭಿಸಲಾಯಿತು. ಹೀಗೆ ಆರಂಭವಾದ ಬ್ಯಾಂಕ್ ವ್ಯವಹಾರ ದಿನದಿಂದ ದಿನಕ್ಕೆ ಪ್ರವರ್ಧಮಾನಗೊಳ್ಳಲಾರಂಭಿಸಿತು. ಕೊಠಡಿಯಿಂದ ಚಿಕ್ಕ ಮನೆಗೆ ಅಲ್ಲಿಂದ ವಿಶಾಲ ಕಟ್ಟಡಕ್ಕೆ ಬದಲಾಗುತ್ತಾ ಬ್ಯಾಂಕ್ ಸದೃಢವಾಗಿ ತಲೆ ಎತ್ತಿ ನಿಂತಿತು. ವಾಸ್ತವವಾಗಿ ಬ್ಯಾಂಕ್‌ನ ಉದ್ದೇಶವಿದ್ದದೆ ಹೆಚ್ಚು ಬಡ್ಡಿ, ಸುಲಿಗೆ ಮಾಡುವ ಲೇವಾದೇವಿದಾರರಿಂದ ಬಡ, ಮಧ್ಯಮ ವರ್ಗದ ಜನರನ್ನು ರಕ್ಷಿಸಬೇಕು. ಅವರ ಕೈಗೆಟಕುವ ದರದಲ್ಲಿ ಅಗತ್ಯವಿದ್ದಾಗ ಸಾಲ ಸೌಲಭ್ಯ ಸುಲಭವಾಗಿ ದೊರೆಯುವಂತೆ ಮಾಡಬೇಕು ಎಂಬ ಸದಾಶಯ ಹೊಂದಿತ್ತು ಅದರಂತೆ ನಡೆದುಕೊಂಡ ಬ್ಯಾಂಕ್‌ನ ಆಡಳಿತ ಮಂಡಳಿಯು ಅನೇಕ ಕುಟುಂಬಗಳ ಕನಸನ್ನು ಸಾಕಾರಗೊಳಿಸಿದ ತೃಪ್ತಿ ಗಳಿಸಿದೆ. ಬ್ಯಾಂಕ್ ಈ ಎತ್ತರಕ್ಕೆ ಬೆಳೆಯುವುದಕ್ಕೆ ಕಾರಣವೇ ಅದರ ಬದ್ಧತೆ ಮತ್ತು ಪ್ರಾಮಾಣಿಕತೆ ಎಂದು ಬ್ಯಾಂಕಿನ ಉದ್ದೇಶದ ಬಗ್ಗೆ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ನಿರ್ದೇಶಕರು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಒಂದು ಕೋ ಆಪರೇಟಿವ್ ಬ್ಯಾಂಕ್ ನೂರು ವರ್ಷ ಯಶಸ್ವಿಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬಂದಿದೆ ಎಂದರೆ ಅದರ ಹಿನ್ನೆಲೆ ಏನೆಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅಷ್ಟರಮಟ್ಟಿಗೆ ಪ್ರಾಮಾಣಿಕತೆಯನ್ನು ಮೆರೆದಿದೆ. ಒಂದು ಶಾಖೆಯನ್ನು ಹೊಂದಿದ್ದ ಬ್ಯಾಂಕ್ ಈಗ ಒಂದು ಕೇಂದ್ರ ಕಛೇರಿ ಹಾಗೂ ೫ ಶಾಖೆಗಳಾದ ರಾಜಾಜಿನಗರ, ವೈಯಾಲಿಕಾವಲ್, ಯಶವಂತಪುರ, ಗಂಗಾನಗರ ಮತ್ತು ಆರ್.ಪಿ.ಸಿ ಲೇಔಟ್ ಗಳನ್ನು ತೆರೆಯುವ ಮೂಲಕ ವ್ಯವಹಾರವನ್ನು ವೃದ್ಧಿಸಿಕೊಂಡಿದೆ. ಬ್ಯಾಂಕಿನಲ್ಲಿ ಒಟ್ಟು ಸದಸ್ಯರು ೧೯೧೬೧ ಹಾಗೂ ೯೬೨೮೫ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತದೆ. ಅಲ್ಲದೆ ಕಾಲಕಾಲಕ್ಕೆ ಬ್ಯಾಂಕ್ ತನ್ನ ಲಾಭಾಂಶದ ಒಂದು ಪಾಲನ್ನು ಆರೋಗ್ಯ, ಶಿಕ್ಷಣ ಕ್ಷೇತ್ರದ ಸಂಘ, ಸಂಸ್ಥೆಗಳಿಗೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯುತ್ತಾ ಬಂದಿದೆ. ಅಲ್ಲದೆ ಸಹಕಾರಿ ಬ್ಯಾಂಕ್‌ಗಳ ಸಾಲಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಭಾಜನವಾಗಿದೆ. ಇಲ್ಲಿಯ ತನಕ ಯಾವುದೇ ಅವ್ಯವಹಾರ ಸುಳಿಯದೆ, ತುಂಬಾ ನಾಜೂಕಾಗಿ, ಪಾರದರ್ಶಕವಾಗಿ ಬೆಳೆಯುತ್ತಾ ಬಂದಿದೆ ಎಂದರು.

Leave a Reply

Your email address will not be published. Required fields are marked *

error: Content is protected !!