ಉದಯವಾಹಿನಿ, ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟಕ್ಕೆ ಬಳ್ಳಾರಿಯಲ್ಲಿ ಸಂಚು ನಡೆದಿರಬಹುದೆಂಬ ಶಂಕೆ ವ್ಯಕ್ತಪಡಿಸಿ ಎನ್‍ಐಎ ಅಧಿಕಾರಿಗಳ ತಂಡ ತನಿಖೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಎನ್‍ಐಎ ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲಿರುವ ಶಂಕಿತ ಉಗ್ರನೊಬ್ಬನನ್ನು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ಈ ಶಂಕಿತ ಉಗ್ರ ಐಸಿಎಸ್‍ನಿಂದ ಪ್ರೇರಣೆಗೊಂಡು ತನ್ನದೇ ಆದ ತಂಡ ಕಟ್ಟಿಕೊಂಡು ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಎನ್‍ಐಎ ಅಧಿಕಾರಿಗಳು ಕಳೆದ ಡಿಸೆಂಬರ್‍ನಲ್ಲಿ ಈ ಶಂಕಿತ ಉಗ್ರನ ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿ ಮನೆಯಲ್ಲಿ ಅಡಗಿಸಿಟ್ಟಿದ್ದ ರಾಸಾಯನಿಕ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ದುಷ್ಕರ್ಮಿ ನಗರದಿಂದ ತುಮಕೂರು ಮೂಲಕ ಬಳ್ಳಾರಿಗೆ ಹೋಗಿದ್ದಾನೆಂದು ತಿಳಿದುಬಂದಿದೆ.

ಬಳ್ಳಾರಿಯ ಶಂಕಿತ ಉಗ್ರ ಸುಲೇಮಾನ್ ಮನೆಯಲ್ಲಿ ದಾಳಿ ವೇಳೆ ಸಿಕ್ಕಿದ ರಾಸಾಯನಿಕ ವಸ್ತುಗಳು ಮತ್ತು ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಿಸಿರುವ ಬಾಂಬ್‍ಗೆ ಬಳಸಲಾಗಿರುವ ರಾಸಾಯನಿಕ ವಸ್ತುಗಳು ಒಂದೇ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಯು ಕೆಫೆಯಲ್ಲಿ ಬಾಂಬ್ ಇಟ್ಟ ನಂತರ ಬಳ್ಳಾರಿಗೆ ಹೋಗಿ ನಂತರ ಬೀದರ್-ಭಟ್ಕಳಕ್ಕೆ ಬಸ್‍ಗಳಲ್ಲಿ ಪ್ರಯಾಣಿಸಿ ತಲೆಮರೆಸಿಕೊಂಡಿರುವ ಹಿನ್ನಲೆಯಲ್ಲಿ ಬೆಂಗಳೂರು ಸ್ಪೋಟಕ್ಕೆ ಬಳ್ಳಾರಿಯಲ್ಲಿ ಸಂಚು ನಡೆದಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಎನ್‍ಐಎ ಅಧಿಕಾರಿಗಳು ಗುರುವಾರ ರಾತ್ರಿಯಿಡೀ ತುಮಕೂರು, ಬಳ್ಳಾರಿಯಲ್ಲಿ ದುಷ್ಕರ್ಮಿಗಾಗಿ ಶೋಧ ನಡೆಸಿದರು. ಇಂದು ಸಹ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!