ಉದಯವಾಹಿನಿ, ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಶೇ.25ರಷ್ಟು ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳು ಇರಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಸಿಬ್ಬಂದಿಗಳ ನಿಯೋಜನೆಗೆ ವಿಶೇಷ ಬಡ್ತಿ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮೈಸೂರು ರಸ್ತೆಯಲ್ಲಿನ ನಗರ ಸಶಸ್ತ್ರ ಮೀಸಲು ಪಡೆ (ಕೇಂದ್ರಸ್ಥಾನ) ಕವಾಯತು ಮೈದಾನದಲ್ಲಿ ನಡೆದ ಮಾಸಿಕ ವಿಶೇಷ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳ ಕವಾಯುತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಇಲಾಖೆಯಲ್ಲಿ ಶೇ.8ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಖ್ಯೆಯನ್ನು ಶೇ.25ಕ್ಕೆ ಹೆಚ್ಚಿಸಲು ಸರ್ಕಾರದ ಉದ್ದೇಶವಾಗಿದೆ. ಗೃಹಸಚಿವರು ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಸಿಬ್ಬಂದಿಗಳ ಹೆಚ್ಚಳಕ್ಕೆ ನೇಮಕಾತಿಗಳನ್ನು ಮಾಡಿಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಹಿಂದೆ ಟೈಪಿಂಗ್, ರಿಸಪ್ಷನ್ ಡೆಸ್ಕ್ ಮತ್ತು ಮಹಿಳಾ ಆರೋಪಿಗಳಿದ್ದಾಗ ಮಾತ್ರ ಮಹಿಳಾ ಸಿಬ್ಬಂದಿಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಇಲಾಖೆಯ ಎಲ್ಲ ಸ್ತರಗಳಲ್ಲೂ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಪಿಸ್ತೂಲ್ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಸಂಚಾರಿ ವಿಭಾಗದಲ್ಲಿ ಮಹಿಳಾ ಸಿಬ್ಬಂದಿಯ ಪಾತ್ರ ಮಹತ್ವವಾಗಿದೆ. ಅವರಿಗೆ ಉತ್ತೇಜನ, ಪ್ರೋತ್ಸಾಹ, ಸ್ಪೂರ್ತಿ, ಹುರಿದುಂಬಿಸುವ ಕಾರ್ಯಗಳನ್ನು ಮಾಡಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಎಂಬ ಪದ ಬಳಕೆ ಪ್ರಚಲಿತವಾಗುತ್ತಿದೆ.
