ಉದಯವಾಹಿನಿ, ತುಮಕೂರು: ಇಲ್ಲಿನ ರಾಜೀವ್‌ಗಾಂಧಿ ನಗರದಲ್ಲಿ ಕೆಎಂಎಫ್ ಹಾಗೂ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರ ಸದಸ್ಯರುಗಳ ೪೦೦ ವಿದ್ಯಾರ್ಥಿನಿಯರ ಸಾಮರ್ಥ್ಯವುಳ್ಳ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಡೇರಿಗೆ ಹಾಲು ಹಾಕುವ ರೈತರ ಹೆಣ್ಣು ಮಕ್ಕಳಿಗಾಗಿ ಹಾಲು ಒಕ್ಕೂಟದ ಹಾಸ್ಟೆಲ್ ನಿರ್ಮಾಣ ಮಾಡುವ ಪರಿಕಲ್ಪನೆ ಉತ್ತಮವಾಗಿದೆ. ೪೦೦ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು.ತುಮಕೂರು ಶೈಕ್ಷಣಿಕ ಕೇಂದ್ರ. ಸುಮಾರು ೨ ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ತುಮಕೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೇನೆ ಎಂದರು.
ಹಾಲು ಒಕ್ಕೂಟದ ವತಿಯಿಂದ ನಿರ್ಮಾಣ ಮಾಡುತ್ತಿರುವ ಹಾಸ್ಟೆಲ್ ಹೆಣ್ಣು ಮಕ್ಕಳಿಗೆ ಬಹಳ ಉಪಯೋಗವಾಗುತ್ತದೆ. ಹೆಣ್ಣು ಮಕ್ಕಳಲ್ಲಿ ವಿದ್ಯೆ ಕಲಿಯುವಂತಹದ್ದು ಜಾಸ್ತಿಯಾಗುತ್ತಿದೆ. ಇದು ಬಹಳ ಒಳ್ಳೆಯ ಬೆಳವಣಿಗೆ ಎಂದರು.ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಯಾವ ದೇಶದಲ್ಲೂ ಇಲ್ಲ. ಬಹುದೊಡ್ಡ ದೇಶವಾದ ಅಮೆರಿಕಾದಲ್ಲೂ ಇಲ್ಲ. ನಮ್ಮ ದೇಶ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಒದಗಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದು ಅವರು ಹೇಳಿದರು.ಶಿಕ್ಷಣ ನಮ್ಮ ಇಡೀ ಜೀವನವನ್ನೇ ಬದಲಾವಣೆ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದರು.ಹಳ್ಳಿಗಳಲ್ಲಿ ಡೇರಿಗೆ ಹಾಲು ಹಾಕುವ ರೈತರ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಾಣ ಮಾಡುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆ ಎಂದರು.ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡುವುದು ೧೦ ವರ್ಷದ ನನ್ನ ಹಿಂದಿನ ಚಿಂತನೆ. ಒಳ್ಳೆಯ ವಾತಾವರಣದಲ್ಲಿ ನಿವೇಶನ ಖರೀದಿ ಮಾಡಿ ಹೆಣ್ಣುಮಕ್ಕಳಿಗಾಗಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ನಮ್ಮ ಜಿಲ್ಲೆಯ ರೈತಾಪಿ ಹೆಣ್ಣು ಮಕ್ಕಳು ವಿವಿಧ ಕೋರ್ಸ್‌ಗಳನ್ನು ಕಲಿಯಲು ತುಮಕೂರು ಜಿಲ್ಲಾ ಕೇಂದ್ರಕ್ಕೆ ಬರಬೇಕಾಗಿದೆ. ಆದರೆ ಅವರಿಗೆ ವಾಸ್ತವ್ಯ ಹೂಡಲು ತುಂಬಾ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಹಾಲು ಒಕ್ಕೂಟದ ವತಿಯಿಂದ ಸುಮಾರು ೪೦೦ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
