ಉದಯವಾಹಿನಿ, ಬೆಂಗಳೂರು: ಲೋಕಸಭೆ ಚುನಾವಣೆ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಬಿಜೆಪಿಯಲ್ಲಿ ಬಣ ರಾಜಕೀಯ ಮುನ್ನೆಲೆಗೆ ಬಂದಿದ್ದು, ತಮ್ಮ ಅತ್ಯಾಪ್ತರಿಗೆ ಟಿಕೆಟ್ ಕೊಡಿಸುವ ಮುಖಂಡರ ವರ್ತನೆಗೆ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ. ಈ ಬಾರಿ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲು ಕ್ಷೇತ್ರದಲ್ಲಿ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದೆ.
ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರನ್ನು ಪರೋಕ್ಷವಾಗಿ ಮಾಜಿ ಸಚಿವ ಸಿ.ಟಿ.ರವಿ ಎತ್ತಿ ಕಟ್ಟುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಇದೇ ಕ್ಷೇತ್ರದಿಂದ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲೇಬೇಕೆಂದು ದೆಹಲಿ ಮಟ್ಟದಲ್ಲೂ ಲಾಬಿಗಿಳಿದಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ತುಮಕೂರಿನಲ್ಲೂ ಬಣ ರಾಜಕೀಯ ತಾರಕಕ್ಕೇರಿದೆ. ಈ ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಲು ಬಿಜೆಪಿಯ ನಿಷ್ಠಾವಂತ ಬಣ ಮುಂದಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ರ್ಪಧಿಸಿ ಸೋತಿದ್ದ ಸೋಮಣ್ಣನವರಿಗೆ ಟಿಕೆಟ್ ನೀಡಬೇಕೆಂಬುದು ಬಿಜೆಪಿಯ ಒಂದು ಬಣದ ವಾದವಾಗಿದೆ. ಇಲ್ಲಿ ಕೂಡ ಯಡಿಯೂರಪ್ಪನವರ ಮಧ್ಯಪ್ರವೇಶವಾಗಿದ್ದು ತಮ್ಮ ಆಪ್ತ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ. ತುಮಕೂರಿನಲ್ಲೂ ಬಿಜೆಪಿ ಎರಡು ಬಣವಾಗಿರುವುದು ಸ್ಪಷ್ಟವಾಗಿದೆ. ಈವರೆಗೂ ಟಿಕೆಟ್ ನೂರಕೆ ನೂರರಷ್ಟು ಖಚಿತ ಎಂದು ಹೇಳಲಾಗುತ್ತಿದ್ದ ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹಗೆ ಎರಡು ದಿನಗಳಿಂದ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿಗಳು ಬಲವಾಗಿ ಹಬ್ಬಿದೆ.
ರಾಜವಂಶಸ್ಥ ಯದುವೀರ ಒಡೆಯರ್ ಹೆಸರು ಏಕಾಏಕಿ ಮುನ್ನಲೆಗೆ ಬಂದಿದೆ. ಆದರೆ ಪ್ರತಾಪ್ ಸಿಂಹಗೆ ಟಿಕೆಟ್ ನೀಡಬೇಕೆಂದು ಶಾಸಕರಾದ ಜಿ.ಟಿ.ದೇವೆಗೌಡ, ಶ್ರೀವತ್ಸ ಸೇರಿದಂತೆ ಇಡೀ ಜಿಲ್ಲಾ ಬಿಜೆಪಿ ಘಟಕ ಅವರ ಬೆನ್ನಿಗೆ ನಿಂತಿದೆ. ಮೂಲಗಳ ಪ್ರಕಾರ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸಿದ್ದೇ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಮೈಸೂರು ಜಿಲ್ಲಾ ಬಿಜೆಪಿ ಘಟಕದಲ್ಲೂ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.
