ಉದಯವಾಹಿನಿ, ಬೆಂಗಳೂರು: ತೀವ್ರ ಬರದಿಂದಾಗಿ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬೇಸಿಗೆಯ ಆರಂಭದಲ್ಲಿ ಬಿಸಿಲಿನ ಝಳ ಏರತೊಡಗಿದ್ದು, ಜನರು ತತ್ತರಿಸುವಂತಾಗಿದೆ. ಬೆಳಿಗ್ಗೆಯಿಂದಲೇ ಸೆಖೆ ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಸರಾಸರಿ 35 ಡಿ.ಸೆ.ನಷ್ಟು ದಾಖಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ 38 ಡಿ.ಸೆ.ಗಡಿ ದಾಟಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಒಣ ಹವೆ ಮುಂದುವರೆದಿದೆ. ಮಾ.16 ವರೆಗೂ ಮಳೆಯಾಗುವ ಸಾಧ್ಯತೆಗಳು ಇಲ್ಲ. ಹೀಗಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.
ಮಾರ್ಚ್‍ನಲ್ಲಿ ಪೂರ್ವ ಮುಂಗಾರು ಮಳೆಯಾಗುವುದು ವಾಡಿಕೆಯಾದರೂ ಸದ್ಯಕ್ಕೆ ಮಳೆಯಾಗುವ ಲಕ್ಷಣಗಳಿಲ್ಲ. ಇದರಿಂದ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಬರದಿಂದಾಗಿ ಸರಾಸರಿ ಒಂದರಿಂದ ಎರಡು ಡಿ.ಸೆ.ನಷ್ಟು ಗರಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆ. ಗರಿಷ್ಠ ತಾಪಮಾನ ಕರಾವಳಿ ಭಾಗದಲ್ಲೂ ಸರಾಸರಿ 35ರಿಂದ 36 ಡಿ.ಸೆ.ನಷ್ಟಿದ್ದರೆ, ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ 38ರಿಂದ 40 ಡಿ.ಸೆ.ನಷ್ಟು ದಾಖಲಾಗುತ್ತಿದೆ. ಅದೇ ರೀತಿ ದಕ್ಷಿಣ ಒಳನಾಡಿನಲ್ಲೂ 35 ಡಿ.ಸೆ. ಗಡಿ ದಾಟಿದ್ದು, 34ರಿಂದ 37 ಡಿ.ಸೆ.ನಷ್ಟು ದಾಖಲಾಗುತ್ತಿದೆ. ಬೇಸಿಗೆಯ ಪ್ರಾರಂಭದಲ್ಲಿ ಪ್ರಖರ ಬಿಸಿಲು ಇರುವುದರಿಂದ ಜನರ ಆರೋಗ್ಯದ ಕಡೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ. ಸಾಧ್ಯವಾದಷ್ಟು ಮಧ್ಯಾಹ್ನದ ಬಿಸಿಲಿನ ವೇಳೆ ಕೊಡೆ ಬಳಸುವುದು ಸೂಕ್ತ. ನೆರಳಿನಲ್ಲಿ ಕೆಲಸ ಮಾಡುವುದು ಸೂಕ್ತ. ಜತೆಗೆ ಆಗಾಗ್ಗೆ ನೀರು ಕುಡಿಯಬೇಕು. ಹಣ್ಣು, ಎಳ ನೀರು ಸೇರಿದಂತೆ ತಂಪು ಪಾನೀಯಗಳನ್ನು ಹೆಚ್ಚು ಸೇವಿಸಬೇಕು ಎಂದು ತಜ್ಞರು ಸಲಹೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!