ಉದಯವಾಹಿನಿ, ಬೆಂಗಳೂರು: ಕುಡಿಯುವ ನೀರಿನ ದಂಧೆ ತಡೆಗಟ್ಟಿ ನೀರಿನ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆಲವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದು, ಅವರಿಗೆ ರಾಜಕಾರಣ ಮಾಡಬೇಡಿ ಎಂದು ಹೇಳುವುದಿಲ್ಲ’ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ ನೀರಿನ ಕೊರತೆ ಇಲ್ಲ, ಕೊಳವೆ ಬಾವಿಗಳ ಬತ್ತಿರುವುದರಿಂದ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗಿದೆ. ಈ ನೀರಿನ ಅಭಾವ ನೀಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕಳೆದ ೩೦-೪೦ ವರ್ಷಗಳಲ್ಲಿ ಇಂತಹ ಭೀಕರ ಬರಗಾಲವನ್ನು ನಾವು ನೋಡಿರಲಿಲ್ಲ. ಬೆಂಗಳೂರಿನಲ್ಲಿರುವ ೧೩,೯೦೦ ಕೊಳವೆ ಬಾವಿಗಳಲ್ಲಿ ೬,೯೦೦ ಕೊಳವೆ ಬಾವಿ ಬತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಖಾಸಗಿ ನೀರಿನ ಟ್ಯಾಂಕರ್ ಗಳನ್ನು ಸರ್ಕಾರದ ಸುಪರ್ದಿಗೆ ಪಡೆದು ನೀರು ಪೂರೈಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ನೀರಿನ ಪೂರೈಕೆಯಲ್ಲಿ ನಡೆಯುತ್ತಿದ್ದ ದಂಧೆಯನ್ನು ನಾವು ತಡೆದಿದ್ದೇವೆ. ಜನರಿಗೆ ಸೂಕ್ತ ದರದಲ್ಲಿ ನೀರು ಸಿಗುವಂತೆ ಮಾಡಿದ್ದೇವೆ. ಕೆಲವು ಕೊಳಗೇರಿ ಪ್ರದೇಶದಲ್ಲಿ ಉಚಿತವಾಗಿ ನೀರು ನೀಡುತ್ತಿದ್ದೇವೆ. ಉಳಿದಂತೆ ಅಪಾರ್ಟ್ ಮೆಂಟ್ ಗಳಿಗೆ ಪೂರೈಸುವ ನೀರಿಗೆ ದರ ನಿಗದಿ ಮಾಡಿದ್ದು, ಕೈಗಾರಿಕೆಗಳ ಬಳಕೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ ಎಂದರು.
