ಉದಯವಾಹಿನಿ ,ಬೆಂಗಳೂರು: ಮಹಾ ಶಿವರಾತ್ರಿಯಂದು ನೃತ್ಯ ಮಾಡುವಾಗ ಮೈ ತಾಗಿಸದ್ದಕ್ಕೆ ಆಕ್ರೋಶಗೊಂಡು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಟರಾಯನಪುರದ ಚೇತನ್, ರಂಗಾ, ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಮೂವರು ಯೋಗೇಶ್ (೨೩) ನನ್ನು ಅಟ್ಟಾಡಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಕೊಲೆ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಬ್ಯಾಟರಾಯನಪುರ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಟ್ಟಾಡಿಸಿ ಕೊಲೆ: ಕಳೆದ ಮಾ. ೮ರ ಮಹಾಶಿವರಾತ್ರಿ ಹಬ್ಬದಂದು ಆ ಬ್ಯಾಟರಾಯನಪುರದ ಎಲ್ಲ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವಲಹಳ್ಳಿಯ ಮುನೇಶ್ವರ ಬ್ಲಾಕ್ ಸಮೀಪದ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಜಮಾಯಿಸಿದ್ದರು. ಯುವಕರೆಲ್ಲ ಸೇರಿ ರಾತ್ರಿ ಕುಣಿದು ಕುಪ್ಪಳಿಸುತ್ತಿದ್ದರು.
ಪಕ್ಕದ ಏರಿಯಾದಲ್ಲಿ ಬೈಕ್ ವಾಷಿಂಗ್ ಕೆಲಸ ಮಾಡಿಕೊಂಡಿದ್ದ ಯೋಗೇಶ್ ಕೂಡ ಅಲ್ಲಿಗೆ ಬಂದಿದ್ದ. ಆ ಸಮಯದಲ್ಲಿ ಕುಣಿಯುವಾಗ ಮತ್ತೊಂದು ಯುವಕರ ಗ್ಯಾಂಗ್‌ಗೆ ಮೈ ತಾಗಿತ್ತು.
ಕಾಂಪೌಂಡ್ ಹಾರಿದ್ದ: ಈ ವೇಳೆ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯೇ ನಡೆದುಹೋಗಿತ್ತು. ಗಲಾಟೆ ತಾರಕೇರುತ್ತಿದ್ದಂತೆ ಯೋಗೇಶ್ ಅಲ್ಲಿಂದ ಕಾಲ್ಕಿತ್ತಿದ್ದ.ಆದರೂ ಬಿಡದ ಹಂತಕರ ಗ್ಯಾಂಗ್ ಸಿಟ್ಟಾಗಿ ಯೋಗೇಶ್‌ನನ್ನು ಹಿಂಬಾಲಿಸಿಕೊಂಡು ಬಂದಿದ್ದರು.
ಜೀವ ಉಳಿಸಿಕೊಳ್ಳಲು ಯೋಗೇಶ್ ಮನೆಯೊಂದರ ಕಾಂಪೌಂಡ್ ಹಾರಿದ್ದ. ಆಗ ನಾಲ್ವರು ಹಂತಕರು ದಾಳಿ ಮಾಡಿ ಚಾಕುವಿನಿಂದ ಯೋಗೀಶ್‌ಗೆ ಸಿಕ್ಕಸಿಕ್ಕ ಕಡೆಗಳಲ್ಲಿ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದರು.
ಪೊಲೀಸರಿಗೆ ಮಾಹಿತಿ: ಮರುದಿನ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಮೊದಲು ಕಾಂಪೌಂಡ್‌ನಲ್ಲಿಟ್ಟಿದ್ದ ಗ್ಲಾಸ್ ಚುರು ಚುಚ್ಚಿದ್ದರಿಂದಲೇ ಯುವಕ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದರು. ಆದರೆ ಪೊಲೀಸರ ತನಿಖೆಯನ್ನು ಇದು ಆಕಸ್ಮಿಕವಲ್ಲ, ಕೊಲೆ ಎಂದು ಗೊತ್ತಾಗಿತ್ತು. ಕೊಲೆ ಮಾಡಿ ಪರಾರಿಯಾಗಿದ್ದ ಹಂತಕರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!