ಉದಯವಾಹಿನಿ, ಬೆಂಗಳೂರು: ರಾಜಾನುಕುಂಟೆ ಗ್ರಾಮಪಂಚಾಯಿತಿಯ ಮಹಿಳಾ ಗ್ರಾಮಸಭೆಯಲ್ಲಿ ನೂರಾರು ಮಹಿಳೆಯರು ರಾಜಾನುಕುಂಟೆ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ “ಮಹಿಳಾ ಗ್ರಾಮಸಭೆ”ಯಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಚೊಚ್ಚಲ ಹೆರಿಗೆ ಖುಷಿಯಲ್ಲಿರುವ ೮೧ಜನ ಗರ್ಭಿಣಿ
ಯರಿಗೆ ಪೂರಕವಾಗಿ ಪೌಷ್ಟಿಕ ಆಹಾರದ ಕಿಟ್,ಬಿಸಿನೀರಿನ ಪ್ಲಾಸ್ಕ್, ಅರಿಸಿನ,ಕುಂಕುಮ ಹಚ್ಚಿ,ಹೂಮುಡಿಸಿ ಗಾಜಿನಬಳೆಗಳೊಂದಿಗೆ,ಉಡಿತುಂಬಿ ಹಾರೈಸಿದ್ದು ನೆರೆದಿದ್ದ ಮಹಿಳೆಯರ ಸಂತಸವನ್ನು ಇಮ್ಮಡಿಗೊಳಿಸಿತು.
ಸಂಸಾರದ ಜವಾಬ್ದಾರಿ ಹೊತ್ತು ಮನೆಯಲ್ಲಿಯೇ ಇರುತ್ತಿದ್ದ ೧೧೨ ಮಹಿಳೆಯರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಮೂಲಕ ಮಹಿಳೆಯರ ಚಟುವಟಿಕೆಯನ್ನು ಹುರಿದುಂಬಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರು ಲವಲವಿಕೆಯಿಂದ ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಮೂಲಕ ಮಹಿಳಾ ಗ್ರಾಮಸಭೆಗೆ ಅರ್ಥ ಕಲ್ಪಿಸಿದ್ದರು. ಮಹಿಳೆಯರು ತಯಾರಿಸಿದ ಸಿಹಿ ಖಾಧ್ಯ ಪ್ರದರ್ಶನ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರ ನೀಡುವ ಮೂಲಕ ಅರ್ಥಪೂರ್ಣವಾಗಿ ನಡೆಸಿದರು.
ಕಾರ್ಯಕ್ರಮದಲ್ಲಿ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ವಾಣಿಶ್ರೀವಿಶ್ವನಾಥ್ ಮಾತನಾಡಿ ಮಹಿಳೆಯರು ವಿಚಾರಗಳನ್ನು ತಿಳಿದುಕೊಳ್ಳಬೇಕು,ಹೆಣ್ಣುಗಂಡಿಗೆ ಸಮಾಂತರವಾಗಿ ಶಿಕ್ಷಣನೀಡಬೇಕು, ಹೆಣ್ಣುಮಕ್ಕಳಿಗೆ ಅವಕಾಶ ನೀಡಿದರೆ ಎಲ್ಲದರಲ್ಲೂ ಮುಂದಿರಲಿದ್ದಾರೆ. ಶಾಸನಸಭೆಯಲ್ಲಿ ಮಹಿಳಾನಾಯಕತ್ವಕ್ಕೆ ಶೇ೫೦ರಷ್ಟು ಹೆಣ್ಣುಮಕ್ಕಳಿಗೆ ಅವಕಾಶ ಬಂದರೆ ಕ್ರಾಂತಿಯಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾಗರಾಜು, ಗ್ರಾಮಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವೆಂಕಟೇಶ್,ಮಾಜಿ ಅಧ್ಯಕ್ಷರಾದ ನರಸಿಂಹಮೂರ್ತಿ(ಎಸ್.ಟಿಡಿ ಮೂರ್ತಿ), ವೀರಣ್ಣರಿಗ್ಲೆ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
