ಉದಯವಾಹಿನಿ, ತುಮಕೂರು: ಗೋಬ್ಯಾಕ್ ಸೋಮಣ್ಣ ಬಿಜೆಪಿ ಕಾರ್ಯಕರ್ತರ ತೀವ್ರ ಪ್ರತಿಭಟನೆ, ವಿರೋಧದ ನಡುವೆಯೂ ಹೈಕಮಾಂಡ್ ಹೊರಗಿನ ಅಭ್ಯರ್ಥಿ ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಕಲ್ಪತರುನಾಡಿನ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿರುವುದು ಸ್ಥಳೀಯವಾಗಿ ಕಮಲ ಪಾಳಯದಲ್ಲಿ ಅಸಮಾಧಾನದ ಬೇಗುದಿಗೆ ಕಾರಣವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವಂತ ಕ್ಷೇತ್ರ ಬಿಟ್ಟು ಹೈಕಮಾಂಡ್ ಸೂಚನೆ ಮೇರೆಗೆ ಚಾಮರಾಜನ ನಗರ ಹಾಗೂ ವರುಣ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಅವರು ಅದೇಕೋ ಏನೋ ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಜಿಲ್ಲೆಯ ಕಮಲಪಾಳಯದಲ್ಲಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ದೊಡ್ಡ ಸಂಖ್ಯೆಯಲ್ಲೇ ಆಕಾಂಕ್ಷಿತರು ಉತ್ಸುಕರಾಗಿದ್ದರು. ತಮ್ಮ ತಮ್ಮ ಗಾಡ್‌ಫಾದರ್‌ಗಳ ಮೂಲಕವೂ ಟಿಕೆಟ್‌ಗಾಗಿ ತೀವ್ರ ಕಸರತ್ತು, ಲಾಬಿ ಸಹ ನಡೆಸಿದ್ದರು.
ಆದರೆ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರು ಛಲಬಿಡದ ವಿಕ್ರಮನಂತೆ ಪಟ್ಟು ಹಿಡಿದು ಸ್ಥಳೀಯ ಆಕಾಂಕ್ಷಿಗಳು, ಮುಖಂಡರು ಹಾಗೂ ನಾಯಕರುಗಳನ್ನು ಬದಿಗೊತ್ತಿ ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಮೈಲುಗೈ ಸಾಧಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಮತ್ತೆ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಲಿ ಸಂಸದ ಜಿ.ಎಸ್. ಬಸವರಾಜು ಸ್ಥಳೀಯ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ತಮ್ಮ ಗೆಲುವಿಗೆ ಶ್ರಮಿಸಿದವರನ್ನು ಕಡೆಗಣಿಸಿ ಹೊರಗಿನ ಅಭ್ಯರ್ಥಿ ಸೋಮಣ್ಣಗೆ ಟಿಕೆಟ್ ಗಿಟ್ಟಿಸುವ ಮೂಲಕ ಸ್ಥಳೀಯರ ವಿರೋಧಕ್ಕೆ ಸೆಡ್ಡು ಹೊಡೆದಿರುವುದು ಪಕ್ಷದಲ್ಲಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.
ಈಗಾಗಲೇ ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಸ್ಥಳೀಯರಾದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಹಿಂದುಳಿದ ವರ್ಗದ ಎಸ್.ಪಿ.ಚಿದಾನಂದ್, ಡಾ. ಪರಮೇಶ್. ದೊಡ್ಡಮನೆ ಗೋಪಾಲಗೌಡ, ವಿನಯ್ ಬಿದರೆ ಅವರು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ಇವರೆಲ್ಲರಿಗೂ ಸೆಡ್ಡು ಹೊಡೆದಂತೆ ಸಂಸದ ಜಿ.ಎಸ್. ಬಸವರಾಜು ಅವರು ಹೊರಗಿನ ಅಭ್ಯರ್ಥಿ ಸೋಮಣ್ಣ ಅವರಿಗೆ ಟಿಕೆಟ್ ಗಿಟ್ಟಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಭಿನ್ನಮತ ಭುಗಿಲೇಳುವಂತೆ ಮಾಡಿದೆ.
ತುಮಕೂರು ಲೋಕಭಾ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರ ಮತದಾರರ ಪ್ರಾಬಲ್ಯ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮುದಾಯದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದರೆ, ಇದೀಗ ಬಿಜೆಪಿ ಲಿಂಗಾಯತ ಸಮುದಾಯದ ಮಾಜಿ ಸಚಿವ ವಿ. ಸೋಮಣ್ಣಗೆ ಮಣೆ ಹಾಕಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ದಳಪತಿಗಳು ಸಹ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿರುವುದು ಈ ಬಾರಿಯ ಚುನಾವಣೆಯ ವಿಶೇಷವಾಗಿದೆ.
