ಉದಯವಾಹಿನಿ, ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕುರಿತಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.ನಗರದಲ್ಲಿಂದು ಘನತ್ಯಾಜ್ಯ ನಿರ್ವಹಣೆ ಕುರಿತಂತೆ ದಕ್ಷಿಣ ವಲಯದ ವಿವಿಧ ಸ್ಥಳಗಳಲ್ಲಿ ’ತ್ಯಾಜ್ಯ ವಿಂಗಡಣೆ, ಪರಿಸರ ಸ್ವಚ್ಛತೆ ಹಾಗೂ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ’ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ದಕ್ಷಿಣ ವಲಯದ ವಲಯ ಆಯುಕ್ತೆ ವಿನೋತ್ ಪ್ರಿಯಾ, ಜಂಟಿ ಆಯುಕ್ತ ಶಿವಕುಮಾರ್ ಅಧ್ಯಕ್ಷತೆ ಹಾಗೂ ಮುಖ್ಯ ಅಭಿಯಂತರ ಎಸ್.ವಿ ರಾಜೇಶ್ ನೇತೃತ್ವದಲ್ಲಿ ಸ್ಥಳೀಯ ಮಟ್ಟದಲ್ಲಿ ಸಾಮೂಹಿಕವಾಗಿ ಐಇಸಿ ಚಟುವಟಿಕೆಯನ್ನು ನಡೆಸಲಾಯಿತು.
ದಕ್ಷಿಣ ವಲಯದಲ್ಲಿ ಘನತ್ಯಾಜ್ಯ ವಿಲೇವಾರಿ, ಹಸಿ ಕಸ, ಒಣ ಕಸ ಹಾಗೂ ಸ್ಯಾನಿಟರಿ ಕಸ ವಿಂಗಡಣೆ, ಮೂಲದಲ್ಲಿಯೆ ತ್ಯಾಜ್ಯವನ್ನು ಸಂಸ್ಕರಿಸುವ, ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡದಿರುವುದು, ಖಾಲಿ ನಿವೇಶನಗಳಲ್ಲಿ ಕಸ ಹಾಕದಿರುವುದು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ನಾಗರೀಕರಲ್ಲಿ ಜಾಗೃತಿ ಮೂಡಿಸಲಾಯಿತು.
