ಉದಯವಾಹಿನಿ, ಬೆಂಗಳೂರು: ಲೋಕಸಭೆ ಚುನಾವಣೆ ಸಿದ್ಧತೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ನಾಳೆ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ. ನಗರದ ಜೆಪಿಭವನದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಕೋರ್‍ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೋರ್‍ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದು, ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಎನ್‍ಡಿಎ ಮೈತ್ರಿಕೂಟ ಸೇರಿದ್ದು ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಪಕ್ಷಕ್ಕೆ ದೊರೆತಿರುವ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‍ಕುಮಾರಸ್ವಾಮಿ ಇಬ್ಬರಲ್ಲಿ ಒಬ್ಬರು ಸ್ರ್ಪಧಿಸುವಂತೆ ಪಕ್ಷದ ಸ್ಥಳೀಯ ಮುಖಂಡರು ನಿರಂತರ ಒತ್ತಾಯ ಮಾಡುತ್ತಿದ್ದಾರೆ.

ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರನ್ನು ಸ್ಪರ್ಧೆಗಿಳಿಸುವ ಬಗ್ಗೆ ಪಕ್ಷದ ವರಿಷ್ಠರಲ್ಲಿ ಹೆಚ್ಚು ಒಲವಿದೆ ಎಂದು ಹೇಳಲಾಗುತ್ತಿದೆ. ಕೋಲಾರ ಮೀಸಲು ಕ್ಷೇತ್ರದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ , , ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಮಲ್ಲೇಶ್ ಬಾಬು ಅವರ ಹೆಸರುಗಳು ಮುಂಚೂಣಿಯಲ್ಲಿವೆ. ನಾಳಿನ ಸಭೆಯಲ್ಲಿ ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಿನ್ನೆ ಕೇಂದ್ರ ಗೃಹಸಚಿವ ಅಮಿತ್ ಷಾ ಅವರನ್ನು ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹಾಗೂ ಅವರ ಪತ್ನಿ ಅನುಸೂಯ ಮಂಜುನಾಥ್ ಅವರು ಭೇಟಿಯಾಗಿದ್ದರು. ಭೇಟಿಯ ಸಂದರ್ಭದಲ್ಲಿ ಕ್ಷೇತ್ರ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಹಾಗೂ ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!