ಉದಯವಾಹಿನಿ, ಚನ್ನಪಟ್ಟಣ: ಐದು ವರ್ಷದ ಹಿಂದೆ ನಾನು ಲೋಕಸಭೆಗೆ ಸ್ಪರ್ಧೆ ಮಾಡಿದ್ದರೆ ಡಿ.ಕೆ.ಸುರೇಶ್ ಇಂದು ರಾಜಕೀಯದಲ್ಲಿ ಬೆಳೆಯುತ್ತಿರಲಿಲ್ಲ. ಇಂದು ಅವರನ್ನು ಬುಡ ಸಹಿತ ಕಿತ್ತುಹಾಕಲು ಡಾ. ಮಂಜುನಾಥ್‌ಅವರನ್ನು ಕಣಕ್ಕೆ ಇಳಿಸಿದ್ದೇವೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.
ತಾಲೂಕಿನ ಮತ್ತೀಕೆರೆ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದ ಡಿ.ಕೆ.ಸುರೇಶ್‌ಅವರ ವಿರುದ್ಧ ನಾನು ಸ್ಪರ್ಧೆ ಮಾಡಿದ್ದರೆ ಅಂದೆ ಅವರು ಸೋಲುತ್ತಿದ್ದರು. ಆದರೆ ನಾನು ರಾಜ್ಯ ರಾಜಕಾರಣಕ್ಕೆ ಸೀಮಿತವಾಗುವ ನಿಟ್ಟಿನಲ್ಲಿ ಅಂದು ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಅವರಿಗೆ ಹೆಚ್ಚು ಅನುಕೂಲ ಆಗಿತ್ತು. ಆದರೆ ಈಗ ನಾವು ಆ ತಪ್ಪನ್ನು ಸರಿ ಮಾಡಿಕೊಳ್ಳುವ ಮೂಲಕ ಡಿ.ಕೆ.ಸುರೇಶ್‌ಅವರನ್ನು ರಾಜಕೀಯದಿಂದ ಬುಡಸಹಿತ ಕಿತ್ತು ಹಾಕಲು ಸಜ್ಜನ ವ್ಯಕ್ತಿ ಡಾ. ಮಂಜುನಾಥ್‌ಅವರನ್ನು ಕಣಕ್ಕೆ ಇಳಿಸಿದ್ದು, ೮ ವಿಧಾನಸಭಾ ಕ್ಷೇತ್ರದಲ್ಲೂ ಡಾ. ಮಂಜುನಾಥ್‌ಅವರ ಎರಡೂ ಪಕ್ಷದ ಕಾರ್ಯರ್ತರಿಗೆ ಮತ್ತು ಸಾಮಾನ್ಯ ಮತದಾರರಿಗೆ ಹುಮ್ಮಸ್ಸು ಇದೆ. ಮಂಜುನಾಥ್‌ಅವರ ಮಾನವೀಯತೆಗೆ ಮಿಡಿಯುತ್ತಾರೆ ಎಂಬ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಡಿ.ಕೆ.ಸುರೇಶ್‌ಅವರನ್ನು ಬುಡಸಹಿತ ಕಿತ್ತು ಹಾಕುವುದರಲ್ಲಿ ಅನುಮಾನ ಇಲ್ಲ ಎಂದು ಯೋಗೇಶ್ವರ್‌ಅವರು ವಾಗ್ದಾಳಿ ಮಾಡಿದರು.
ಡಿಕೆಶಿ ಸಹೋದರರಿಬ್ಬರೂ ಕಣ್ಣು, ಕೈ, ಕಾಲಿನಲ್ಲೇ ಮಾತನಾಡಿಸುತ್ತಾರೆ. ಇದರಿಂದ ಅವರ ಪರ ಕಾರ್ಯಕರ್ತರಿಗೂ ಒಲವಿಲ್ಲ. ಸಜ್ಜನ ಮತ್ತು ಪ್ರಬಲ ನಾಯಕನಿಗಾಗಿ ಕಾಯುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!