ಉದಯವಾಹಿನಿ, ಹರಪನಹಳ್ಳಿ: ತಾಲೂಕಿನ ಐತಿಹಾಸಿಕ, ಪ್ರಸಿದ್ಧ ಕೂಲಹಳ್ಳಿ ಶ್ರೀ ಗೋಣಿಬಸವೇಶ್ವರ ರಥೋತ್ಸವವು ಬುಧವಾರ ಸಂಜೆ 5.12ಕ್ಕೆ ಅಪಾರ ಭಕ್ತರ ಮಧ್ಯೆ ಸಕಲ ಬಿರುದಾವಳಿಗಳಿಂದ ವೈಭವದಿಂದ ಜರುಗಿತು.
ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟ ಹಾಗೂ ಹಲವು ದೇವಾನುದೇವತೆಗಳ ಭಾವಚಿತ್ರ ಅಳವಡಿಕೆಯ ಜತೆಗೆ, ಬಾಳೆದಿಂಡು, ಮಾವಿನÀ ತೋರಣ ಹಾಗೂ ಪುಷ್ಪ ಮಾಲೆಯೊಂದಿಗೆ ಅಲಂಕರಿಸಲಾಗಿತ್ತು.
ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಸಕಲ ವಾದ್ಯಗಳು, ಭಾಜ -ಭಜಂತ್ರಿಯೊಂದಿಗೆ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ. ವಿಶೇಷ ಪೂಜೆ ಸಲ್ಲಿಸಿ ನಂತರ ದೇಗುಲದಲ್ಲಿನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆ ಹೊರಟಿತು. ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೋಣಿಬಸವೇಶ್ವರರ ಧ್ವಜವನ್ನು ಬಹಿರಂಗ ಹರಾಜು ಮಾಡಲಾಯಿತು. ಈ ವೇಳೆ ಅಡವಿ ಸೋಮಲಾಪುರ ಮರಿಯಪ್ಪ 2.85 ಲಕ್ಷ ರೂ.ಗಳಿಗೆ ಸ್ವಾಮಿಯ ಧ್ವಜವನ್ನು ತಮ್ಮದಾಗಿಸಿಕೊಂಡರು.
ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ರಥಮಂಟಪದಲ್ಲಿ ಪ್ರತಿಷ್ಠಾಪಿಸುವ ಮೂಲಕ ಅರ್ಚಕರು ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತಿಯೇ ಭರ್ಜರಿ ಜಯಘೋಷಗಳ ನಡುವೆ ರಥೋತ್ಸವಕ್ಕೆ ಉತ್ತರಾಭಿಮುಖವಾಗಿ ಚಾಲನೆ ನೀಡಲಾಯಿತು. ಹರಕೆ ಹೊತ್ತಿದ್ದ ಭಕ್ತರು, ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು ತೂರಿ ಹರಕೆ ಸಮರ್ಪಿಸಿದರು. ಚಿತ್ರದುರ್ಗ ದಾವಣಗೆರೆ, ಬಳ್ಳಾರಿ, ಗದಗ, ಹಾಗೂ ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನಾದ್ಯಂತ ಭಕ್ತ ಸಾಗರವೇ ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.
ಶಾಸಕಿ ಎಂ.ಪಿ.ಲತಾ, ಹೆಚ್.ಎಂ.ಮಲ್ಲಿಕಾರ್ಜುನ, ಡಿವೈಎಸ್‍ಪಿ ವೆಂಕಟಪ್ಪ ನಾಯಕ, ಸಿಪಿಐ ಸಾಬಯ್ಯ, ಪಿಎಸ್‍ಐ ಶಂಭುಲಿಂಗ ಎಸ್.ಹಿರೇಮಠ್, ಕಿರಣ್‍ಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು,
ಗ್ರಾ.ಪಂ ಅಧ್ಯಕ್ಷ ಬಸವರಾಜ, ಪೂಜಾರ ಕೊಟ್ರೇಶ್, ಅಂಬಳಿ ಆನಂದ, ಎಚ್.ಗೋಣೆಪ್ಪ, ವಿ,ವೆಂಕಟೇಶ, ಪಿ.ಬಸವರಾಜ, ಕೊಟ್ರೇಶ, ಅರ್ಚಕರಾದ ಸಿದ್ದಪ್ಪ, ಹಾಲೇಶ, ಶರಣಪ್ಪ ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!