ಉದಯವಾಹಿನಿ, ಕೆ.ಆರ್.ಪೇಟೆ: ಸಾಧನೆಗೆ ಪದವಿ ಪ್ರಮಾಣ ಪತ್ರ, ತಾಂತ್ರಿಕತೆ, ಕೌಶಲ್ಯಗಳಷ್ಟೇ ಸಾಲದು ಅದರ ಜೊತೆಗೆ ವ್ಯಕ್ತಿತ್ವ ವಿಕಸನವೂ ಅಗತ್ಯ ಎಂದು ರಾಜ್ಯ ವ್ಯಕ್ತಿತ್ವ ವಿಕಸನ ತರಬೇತುದಾರ ಶಂಕರ್ ಬೆಳ್ಳೂರು ತಿಳಿಸಿದರು.
ಪಟ್ಟಣದಲ್ಲಿರುವ ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲಾ ಆವರಣದಲ್ಲಿ ಬಿಜಿಎಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ಜೀವನದ ಗುರಿಸಾಧನೆ ಕುರಿತು ಕೆರಿಯರ್ ಲಾಂಚರ್ ಕಾರ್ಯಕ್ರಮದ ಹಾಗೂ ವಿದ್ಯಾರ್ಥಿಗಳೊಂದಿಗೆ ಚಿಂತನ ಮಂತನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮೊದಲು ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮನೋಭಾವ ಇದ್ದರೆ ನಮ್ಮ ವ್ಯಕ್ತಿತ್ವ ಉತ್ತಮಗೊಂಡು ಉತ್ತಮ ಸಾಧಕರಾಗಿ ಮೂಡಿ ಬರಲು ಸಾಧ್ಯ.ಬಹುತೇಕ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಮೆರಿಟ್‍ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಮಾತ್ರ ಪ್ರಯತ್ನಿಸುತ್ತವೆ. ಆದರೆ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ, ಅಭಿವ್ಯಕ್ತಿ ಸಾಮಥ್ರ್ಯ, ವ್ಯಕ್ತಿತ್ವ ರೂಪಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಇದು ನಮ್ಮ ದುರಂತ ಎಂದು ವಿಷಾದಿಸಿದರು.ನಮ್ಮ ಸುತ್ತಲಿನ ವಾತಾವರಣವನ್ನು ಅರಿತುಕೊಂಡು ಅದಕ್ಕೆ ಹೊಂದಿಕೊಳ್ಳುವ ಸಕಾರಾತ್ಮಕ ನಡವಳಿಕೆ ನಮ್ಮದಾಗಬೇಕು. ಯಾವುದೇ ಸಂದರ್ಭವನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಬೇಕು. ಬಹುತೇಕ ವಿದ್ಯಾರ್ಥಿಗಳ ಭವಿಷ್ಯ ಈಗ ಸಿಇಟಿಗಳ ಮೇಲೆ ನಿರ್ಧರಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಅತ್ಯಂತ ಪ್ರಮುಖವಾಗುತ್ತದೆ ಎಂದರು.
