ಉದಯವಾಹಿನಿ, ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದು ಬದಲಿಗೆ ಯುವ ನಾಯಕ ಅಲೋಕ್ ವಿಶ್ವನಾಥ್ ಅವರಿಗೆ ನೀಡಬೇಕೆಂದು ಚಿಕ್ಕಬಳ್ಳಾಪುರ ಬಿಜೆಪಿ ಮುಖಂಡರು ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಟಿಯಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಗೌರಿಬಿದನೂರು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವಿನಾರಾಯಣ್ ರೆಡ್ಡಿ, ಬಿಜೆಪಿ ಮುಖಂಡ ಡಾ.ಶಶಿಧರ್, ಬೆಂ.ನ.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷಾದ ಸಿ.ಮುನಿರಾಜು,ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಕ್ಷೇತ್ರ ಮುಖಂಡರಾದ ದಿಬ್ಬೂರು ಜಯಣ್ಣ,ಎಸ್.ಜಿ.ನರಸಿಂಹಮೂರ್ತಿ (ಎಸ್‌ಟಿಡಿ ಮೂರ್ತಿ), ಪ್ರಶಾಂತ್ ರೆಡ್ಡಿ, ಅದ್ದೆ ವಿಶ್ವನಾಥಪುರ ಮಂಜುನಾಥ್ ಸೇರಿದಂತೆ ಹಲವಾರು ಮುಖಂಡರು ಜಂಟಿ ಪತ್ರಿಕಾಗೋಷ್ಟಿ ನಡೆಸಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಿಲ್ಲ.ಆದರೆ, ಈಗಲೆ ಪ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ಸುಧಾಕರ್ ಸಚಿವರಾಗಿದ್ದಾಗ ಕಾರ್ಯಕರ್ತರು ಮುಖಂಡರಿಗೆ ಸ್ವಂದಿಸಿಲ್ಲ.ಹೀಗಾಗಿ, ಸುಧಾಕರ್ ಅವರಿಗೆ ಟಿಕೆಟ್ ನೀಡಬಾರದೆಂದು ಕ್ಷೇತ್ರದ ಜನತೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಕ್ಷೇತ್ರದ ಜನತೆ ಅಲೋಕ್ ವಿಶ್ವನಾಥ್ ಗೆ ಟಿಕೆಟ್ ಸಿಗುತ್ತೆ ಗೆಲುವು ಖಚಿತ ಎನ್ನುವ ವಿಶ್ವಾಸದಲ್ಲಿದ್ದಾರೆ. ಅಲೋಕ್ ಗೆ ಇಂಗ್ಲೀಷ್,ಹಿಂದಿ ಭಾಷೆಯಲ್ಲಿ ಹಿಡಿತವಿದೆ. ಅಲೋಕ್ ಎಂಪಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ.ಅಲೋಕ್ ಗೆ ಟಿಕೆಟ್ ಕೊಡಲು ನಿರಾಕರಿಸಿದರೆ ನಾನು ಅಭ್ಯರ್ಥಿಯಾಗುತ್ತೇನೆ. ನನಗೆ ಟಿಕೆಟ್ ಕೊಡಿ ಎಂದು ಕೇಂದ್ರ ನಾಯಕರಿಗೆ ಒತ್ತಾಯಿಸಿದರು. ಕೇಂದ್ರದ ಅಂತಿಮ ತೀರ್ಮಾನವಾದ ನಂತರ ಭಾನುವಾರ ಕ್ಷೇತ್ರದ ಮುಖಂಡರು ಸಭೆ ಸೇರಿ ಪಕ್ಷದ ಚೌಕಟ್ಟಿನಲ್ಲಿ ಏನು ಮಾಡಬೇಕು ಅಂತ ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖಂಡರು ಒಕ್ಕೂರಲಿನಿಂದ ಹೇಳಿದರು.
