ಉದಯವಾಹಿನಿ, ಯಾದಗಿರಿ: ಜಿಲ್ಲೆಯ ಗುರುಮಟಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಣ್ಣ ಸಂಬರ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ಪ್ರತಿಭಟನೆ ಮತ್ತು ಮತಬಹಿಷ್ಕಾರದ ಎಚ್ಚರಿಕೆಗೆ ಎಚ್ಚೆತ್ತ ಅಧಿಕಾರಿಗಳು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಕುಡಿವ ನೀರಿನ ಕಾಮಗಾರಿ ಆರಂಭಿಸಿದರು.ಇತ್ತಿಚೆಗೆ ಗ್ರಾಮಕ್ಕೆ ಭೇಟಿ ನೀಡಿ ಪ್ರತಿಭಟನೆ ಮಾಡಿದರೂ ಕಾಟಾಚಾರಕ್ಕೆ ಭೆಟಿ ನೀಡಿದ್ದ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ನಂತರ ಇದೀಗ ಕುಡಿವ ನೀರಿನ ಪೈಪ್ ಲೈನ್ ಹಾಕಲು ಚಡಂಡಿ ಸ್ವಚ್ಛತೆ ಹಾಗೂ ಬ್ಲಿಚಿಂಗ್ ಪೌಡರ್ ಸಿಂಪಡಣೆಗೆ ಮುಂದಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ, ಈಗಾಗಲೇ ಪ್ರತಿಭಟನೆ ನಡೆಸಿದ ನಂತರ ಅಧಿಕಾರಿಗಳು ತಡವಾಗಿ ಎಚ್ಚೆತ್ತುಕೊಂಡು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಆರಂಭಿಸಿದ್ದಾರೆ. ಬಿರು ಬೇಸಿಗೆ ಇರುವುದರಿಂದ ಕುಡಿವ ನೀರಿಗೆ ಸರ್ಕಾರ ಪ್ರಥಮಾದ್ಯತೆ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿಗೆ ಸಂಕಷ್ಟ ಉಂಟಾಗಿತ್ತು. ಈದೀಗ ಹೋರಾಟಕ್ಕೆ ಸ್ಪಂದಿಸಿ ಕುಡಿವ ನೀರು, ನೈರ್ಮಲ್ಯ ಕ್ಕೆ ಕ್ರಮ ಕೈಗೊಂಡಿರುವುದು ಹೋರಾಟಕ್ಕೆ ಸಿಕ್ಕ ಜಯವಾಗಿದೆ.
ಕೂಡಲೇ ಎಲ್ಲ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಬೇಕು ಅಲ್ಲಿಯವರೆಗೂ ಹೋರಾಟ ನಿರಂತರವಾಗಿ ನಡೆಯುತ್ತದೆ ಯಾವುದೇ ಕಾರಣಕ್ಕೂ ಕಾಟಾಚಾರದ ಕೆಲಸ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಹೋರಾಟಕ್ಕೆ ಮಣಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
