ಉದಯವಾಹಿನಿ, ವಿಜಯಪುರ : ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ನಿದಾನಕ್ಕೆ ಶುರುವಾಗುತ್ತಿದ್ದಂತೆ ಜನಸಾಮಾನ್ಯರು ತತ್ತರಗೊಂಡು ತಂಪು ಪಾನೀಯಗಳಿಗೆ ಮೊರೆಹೋಗುತ್ತಿದ್ದು ಇದರಿಂದಾಗಿಯೇ ತಂಪು ಪಾನೀಯಗಳ ದರ ಸಮರಕ್ಕೆ ಈಗಾಗಲೇ ಜನರ ಕೈ ಸುಟ್ಟುಕೊಳ್ಳುವಂತಾಗಿದೆ.
ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈಬೆವರನ್ನು ಇಳಿಸುತ್ತಿದ್ದಾನೆ. ಇದರಿಂದ ಜನರು ಸುಸ್ತಾಗಿ ದಾಹ ನೀಗಿಸಿಕೊಳ್ಳಲು ತಂಪು ಪಾನೀಯ, ಕಬ್ಬಿನ ಹಾಲು, ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ರಸದ ಮೊರೆಹೋಗಿದ್ದಾರೆ.
ಮುಂಗಾರು ಹಿಂಗಾರು ಹಂಗಾಮ ಮುಗಿಯುತ್ತಿದ್ದಂತೆ ಬಯಲು ಸೀಮೆಯ ಜಿಲ್ಲೆಗಳಲ್ಲಿ ಸದ್ಯಕ್ಕೆ ದಗದಗನೆ ಬಿಸಿಲೇರಿ ಜನರ ನೆತ್ತಿ ಸುಡುತ್ತಿದ್ದು, ಮಕ್ಕಳು ಮಹಿಳೆಯರು, ವಯೋವೃದ್ದರು ಬಿಸಿಲಿನ ಪರಿಣಾಮ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಸತತ ಎರಡು ಮೂರು ವರ್ಷಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಕೆರೆ, ಕುಂಟೆ ಗಳಲ್ಲಿ ನೀರು ತುಂಬಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇಲ್ಲದೆ ಇದ್ದರೂ ಬಿಸಿಲಿನ ಆರ್ಭಟ ಮಾತ್ರ ಜನರನ್ನು ಕಂಗೆಡಿಸಿದೆ.
ಬೇಸಿಗೆ ಪ್ರಾರಂಭದಲ್ಲಿಯೇ ಉರಿಬಿಸಿಲಿನ ಅನುಭವಕ್ಕೆ ಬೆಚ್ಚಿಬೀಳುತ್ತಿರುವ ನಾಗರಿಕರು ಮಾರ್ಚ್, ಏಪ್ರಿಲ್, ಮೇ ತಿಂಗಳು ಹೇಗಪ್ಪಾ ಕಳೆಯುವುದು ಎಂಬ ಚಿಂತೆಯಲ್ಲಿದ್ದು ಜಿಲ್ಲೆಯ ಜನತೆ ಛತ್ರಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನ ಜೊತೆಗೆ ಬಿಸಿ ಗಾಳಿಯೂ ಸಹ ಜನರನ್ನು ತತ್ತರಿಸುವಂತೆ ಮಾಡಿದೆ. ನಾಗರೀಕರು ಬಿಸಿಲಿನ ತಾಪಕ್ಕೆ ಧಣಿವಾರಿಸಲು ಎಳೆನೀರು ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಬೇಸಿಗೆ ಬಂದರೆ ಸಾಕು ಜನರು ಎಳೆನೀರಿನ ಮೊರೆಹೋಗಿ ದೇಹ ತಂಪು ಮಾಡಿಕೊಳ್ಳುವುದು ಸಹಜ ಆದರೆ, ಎಳೆನೀರಿನ ಬೆಲೆ ೪೦-೫೦ ರವರೆಗೂ ಹೆಚ್ಚಾಗಿದ್ದರೂ, ಬಿಸಿಲಿನ ತಾಪವನ್ನು ತಗ್ಗಿಸಿಕೊಳ್ಳಲು ಜನತೆ ಆರೋಗ್ಯದಾಯಕ ಎಳೆನೀರಿನ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ತಂಪು ಪಾನಿಯ ಹಾಗೂ ಕಬ್ಬಿನ ರಸಕ್ಕೆ ಮೊರೆ ಹೋಗುತ್ತಿದ್ದಾರೆ. ಈಬಾರಿ ರಣ ಬಿಸಿಲಿನಿಂದ ನೆತ್ತಿ ಸುಡುತ್ತಿದ್ದು, ಬಿಸಿಲಿನ ತಾಪ ಮತ್ತಷ್ಟು ತೀವ್ರಗೊಳ್ಳಲಿದೆ. ಬೆಳಿಗ್ಗೆ ೭.೩೦ರ ವೇಳೆಯಲ್ಲಿರುವ ಎಳೆ ಬಿಸಿಲು ಜನರ ಮೈಸುಡಲು ಪ್ರಾರಂಭಿಸುತ್ತದೆ. ಸಂಜೆ ೫ ಗಂಟೆಯವರೆಗೂ ಬಿಸಿಲಿನ ಜಳ ಇರುವುದರಿಂದ ಮೈ, ಚರ್ಮದ ಜೊತೆ ಬಾಯಿ ಹೊಣಗುವ ಅನುಭವವಾಗುತ್ತದೆ. ಬಿಸಿಲಿನ ತಾಪದ ತೀವ್ರತೆಗೆ ಜನರು ತಂಪು ಪಾನಿಯ, ಪಾನಕ, ಮಜ್ಜಿಗೆ ಎಳೆನೀರು ಕಡೆ ವಾಲುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!