ಉದಯವಾಹಿನಿ, ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ದೇಶದಲ್ಲಿ ಎನ್‍ಡಿಎ ಒಕ್ಕೂಟ ಅಧಿಕಾರಕ್ಕೆ ಬರುವುದನ್ನು ತಡೆಯಲು ರೈತ, ಕಾರ್ಮಿಕ ಮಹಾ ಪಂಚಾಯತ್ ಕರಪತ್ರ, ಮತದಾರರ ಭೇಟಿ ಮೊದಲಾದವುಗಳ ಮೂಲಕ ಶ್ರಮಿಸಲಿದೆ. ಇದರಲ್ಲಿ ರಾಜ್ಯ ರೈತ ಸಂಘವವೂ ಪಾಲ್ಗೊಳ್ಳಲಿದೆ ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಕಳೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ಮೊದಲಾದ ಸಂಘಟನೆಗಳು ಶ್ರಮಿಸಿದ ಫಲವಾಗಿ ಬಿಜೆಪಿಯನ್ನು ವಿಧಾನಸೌಧದಿಂದ ತೊಲಗಿಸಲಾಯಿತು.
ಈಗಲೂ ಇದೇ ಪ್ರಯತ್ನ ಮತ್ತಷ್ಟು ವಿಸ್ತಾರವಾಗಿ ಮಾಡಲಾಗುತ್ತಿದೆ. ಕಳೆದ 10 ವರ್ಷಗಳ ಮೋದಿ ಆಡಳಿತ ರೈತ, ಕಾರ್ಮಿಕ, ಜನಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಅವಧಿಯಲ್ಲಿ ಸುಮಾರು ಒಂದು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋದಿ ಸರ್ಕಾರ ಮಾತಿಗೆ ತಪ್ಪಿದೆ,. ವಿದ್ಯಚ್ಛಕ್ತಿ ಕಾಯ್ದೆ ತಿದ್ದುಪಡಿಯನ್ನು ರೈತ ಮುಖಂಡರ ಒಪ್ಪಿಗೆ ಇಲ್ಲದೇ ಸಂಸತ್‍ನಲ್ಲಿ ಮಂಡಿಸಲಾಗಿದೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರಾದರೂ ಅದು ನಡೆದಿಲ್ಲ. ಕೇವಲ ಉತ್ಪಾದನಾ ವೆಚ್ಚ ದ್ವಿಗುಣಗೊಂಡಿದೆ. ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರೂ, ಇದಕ್ಕಾಗಿ ಯೋಜನೆ ರೂಪಿಸಿಲ್ಲ. ಕೇವಲ ಕಾಪೆರ್Çರೇಟ್ ಕಂಪನಿಗಳ ಸಾಲ ಮಾತ್ರ ಮನ್ನಾ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ, ಬಾಗಲಕೋಟೆ, ಉತ್ತರ ಕನ್ನಡ ಮತ್ತು ಕೆಲವು ಕ್ಷೇತ್ರಗಳಲ್ಲಿ ರೈತ ಸಂಘದ ಮುಖಂಡರು ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಾಲಾವಕಾಶ ಇಲ್ಲದ ಕಾರಣ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸುತ್ತಿಲ್ಲ. ಇನ್ನು, ರೈತ ಸಂಘ ಇಂತಹ ಯಾವುದೇ ಪಕ್ಷಕ್ಕೂ ಮತ ಹಾಕುವಂತೆ ಮನವಿ ಮಾಡುವುದಿಲ್ಲ. ಕೇವಲ ಬಿಜೆಪಿಗೆ ಮಾತ್ರ ಹಾಕಬೇಡಿರೆಂದು ಮನವಿ ಮಾಡುತ್ತದೆಂದರು. ಹೊಸಕೋಟೆ ಬಸವರಾಜು, ಪ್ರಸನ್ನ ಎನ್.ಗೌಡ, ಪಿ.ಮರಂಕಯ್ಯ, ನಾಗನಳ್ಳಿ ವಿಜೇಂದ್ರ ಇದ್ದರು.
