ಉದಯವಾಹಿನಿ, ಬೆಂಗಳೂರು : ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಸಲೀಸಾಗಿ ಮಾಡಿ ಮುಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಕೋಲಾರ ಕಬ್ಬಿಣದ ಕಡಲೆಯಾಗಿದ್ದು, ರಾಜ್ಯನಾಯಕರು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಕೈಚೆಲ್ಲಿದ್ದಾರೆ.ಬಾಕಿ ಇರುವ ನಾಲ್ಕು ಕ್ಷೇತ್ರಗಳ ಪೈಕಿ ಬಳ್ಳಾರಿಗೆ ತುಕಾರಾಂ, ಚಾಮರಾಜನಗರಕ್ಕೆ ಮಾಜಿ ಶಾಸಕ ನಂಜುಂಡಸ್ವಾಮಿಯವರ ಪೈಪೊಟಿಯನ್ನು ಹತ್ತಿಕ್ಕಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರಿಗೆ ತೀವ್ರ ಪೈಪೊಟಿ ನೀಡಿರುವ ಮಾಜಿ ಸಚಿವ ಎಂ.ಅರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಟಿಕೆಟ್ ಗಿಟ್ಟಿಸುವುದು ಖಚಿತವಾಗಿದೆ.ಕೋಲಾರ ಕ್ಷೇತ್ರದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದಿರುವುದರಿಂದಾಗಿ ರಾಜ್ಯ ನಾಯಕರಿಗೆ ತಲೆನೋವು ಎದುರಾಗಿದೆ.
