ಉದಯವಾಹಿನಿ, ವಿಜಯಪುರ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ವತಿಯಿಂದ ಜಲಮೂಲಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷರಾದ ಚಿತ್ರ ಕುಮಾರ್ ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ದಿನ್ನೂರು ಗ್ರಾಮದಲ್ಲಿರುವ ವೆಂಕಟೇಶ್ ರವರ ನಿವಾಸದ ಸಭಾಭವನದಲ್ಲಿ ವಿಜಯಪುರ ಟೌನ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್‌ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.
ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ಗುರಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿರ್ಮೂಲನೆ, ಸಸಿ ನೆಡುವಿಕೆ ಹಾಗೂ ನೀರಿನ ಸ್ವಚ್ಛತಾ ಕಾರ್ಯಕ್ರಮವಾಗಿರುತ್ತದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಸೀನಿಯರ್ ಚೇಂಬರ್‌ನ ಅಧಿಕಾರ ಸ್ವೀಕರಿಸಿದ ಕೆ. ವೆಂಕಟೇಶ್ ಅವರು ಮಾತನಾಡುತ್ತಾ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಹೆಮ್ಮೆಯಾಗಿದೆ ಎಂದು ಜೆಸಿಐ ಸಂಸ್ಥೆಯು ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಸೀನಿಯರ್ ಛೇಂಬರ್‌ನ ನಿರ್ಗಮಿತ ಅಧ್ಯಕ್ಷರಾದ ಎಂ.ಶಿವಕುಮಾರ್‌ರವರು ಮಾತನಾಡಿ, ನೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಪ್ರಶಸ್ತಿಗಳನ್ನು ಗಳಿಸಿರುವುದರೊಂದಿಗೆ ಈ ಸಾಲಿನಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಂತಸ ವ್ಯಕ್ತಪಡಿಸಿದರು.
