ಉದಯವಾಹಿನಿ, ಬೆಳಗಾವಿ : ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತ್ರಗಳಲ್ಲೂ ಜಯ ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಂಚರಿಸಿ ಪಕ್ಷದ ಪರ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದರು.
ಬೆಳಗಾವಿ ಕ್ಷೇತ್ರದಲ್ಲಿ ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರನ್ನು ಒಮ್ಮತದಿಂದ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮಂಡ್ಯ ಕ್ಷೇತ್ರದ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಆ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ಸ್ಪರ್ಧೆ ನಿಶ್ಚಯಿಸಲಾಗಿದ್ದು, ಸುಮಲತಾ ಅವರಿಗೆ ಬೇರೆ ಅವಕಾಶಗಳಿವೆ ಎಂದು ನುಡಿದರು.
ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಹಣ ಬಾಕಿ ಇದೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಈಗಾಗಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದಿಂದ ರಾಜ್ಯಕ್ಕೆ ಕೊಡಬೇಕಾದುದನ್ನೆಲ್ಲ ಕೊಟ್ಟಿದ್ದೇವೆ, ಒಂದು ಪೈಸೆಯನ್ನೂ ಬಾಕಿ ಉಳಿಸಿಕೊಂಡಿಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ರವಿಕುಮಾರ ಮಾತನಾಡಿ, ಸ್ಥಳೀಯ ನಾಯಕರೊಂದಿಗೆ ಸೇರಿ ಚರ್ಚೆ ಮಾಡಲಾಗಿದೆ. ಜಗದೀಶ್ ಶೆಟ್ಟರ್ ಗೆಲುವಿಗೆ ಎಲ್ಲರೂ ಶ್ರಮಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!