ಉದಯವಾಹಿನಿ, ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ, ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ಬೆಂ. ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಆಶಾರಾವ್, ಕೇಂದ್ರ ಜಿಲ್ಲಾಧ್ಯಕ್ಷೆ, ಮಾಜಿ ಪಾಲಿಕೆ ಸದಸ್ಯೆ ಹೇಮಲತಾ ಸತೀಶ್ ಉಪಸ್ಥಿತರಿದ್ದರು.
ಬೆಂಗಳೂರು,ಮಾ.೨೮ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರವು ಮಹಿಳಾ ಸಬಲೀಕರಣಕ್ಕೆ ಕಳೆದ ೧೦ ವರ್ಷಗಳಲ್ಲಿ ಗರಿಷ್ಠ ಆದ್ಯತೆ ಕೊಟ್ಟಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ತಿಳಿಸಿದರು.
ಹೋಟೆಲ್ “ಜಿ.ಎಂ. ರಿಜಾಯ್ಸ್” ನ ಬಿಜೆಪಿ ಲೋಕಸಭಾ ಚುನಾವಣಾ ೨೦೨೪ರ ಮಾಧ್ಯಮ ಕೇಂದ್ರದಲ್ಲಿ ಇಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಶೇ ೩೩ರಷ್ಟು ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ರದ್ದು, ಮಹಿಳಾ ಅತ್ಯಾಚಾರ ಮಾಡಿದ ಅಪರಾಧಿಗೆ ಗಲ್ಲು ಶಿಕ್ಷೆ ಸೇರಿ ಅನೇಕ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮಹಿಳಾ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ. ಶೇ ೬೧ ಮಹಿಳೆಯರು ಆ ಯೋಜನೆಯ ಪ್ರತಿಫಲ ಪಡೆದಿದ್ದಾರೆ ಎಂದು ವಿವರಿಸಿದರು.
ಶೇ ೪೫ ಮಹಿಳೆಯರು ಸ್ಟಾಂಡ್ ಅಪ್ ಯೋಜನೆಯ ಲಾಭ ಪಡೆದಿದ್ದಾರೆ. ಜನ್ ಧನ್ ಯೋಜನೆಯಡಿ ೨೦೧೪ರ ಹಿಂದೆ ಯುಪಿಎ ಆಡಳಿತ ಇದ್ದಾಗ ೧೦.೩ ಕೋಟಿ ಬ್ಯಾಂಕ್ ಖಾತೆಗಳಿದ್ದವು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಳೆದ ೧೦ ವರ್ಷಗಳಲ್ಲಿ ೫೧.೬ ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ೨೮ ಕೋಟಿ ಮಹಿಳಾ ಖಾತೆಗಳಿವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇ ೭೦ರಷ್ಟು ಮನೆಗಳನ್ನು ಮಹಿಳೆಯರಿಗೇ ಕೊಡಲಾಗುತ್ತಿದೆ. ವಿಶ್ವಕರ್ಮ ಯೋಜನೆಯಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗೀದಾರರಾಗಿದ್ದಾರೆ. ವಿಶ್ವಕರ್ಮ ಯೋಜನೆಯ ನೋಂದಣಿಯಲ್ಲಿ ನಮ್ಮ ಕರ್ನಾಟಕ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು.
ಜನೌಷಧಿ ಕೇಂದ್ರಗಳಿಂದ ಮಹಿಳೆಯರು ದೊಡ್ಡ ಪ್ರಮಾಣದ ಪ್ರಯೋಜನ ಪಡೆಯುತ್ತಿದ್ದಾರೆ. ಅದರಲ್ಲೂ ಕರ್ನಾಟಕವು ಜನೌಷಧಿ ಕೇಂದ್ರಗಳಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳು ಮೀಟರ್ ಬಡ್ಡಿ ಕಟ್ಟುವುದನ್ನು ತಪ್ಪಿಸಲು ಪ್ರಯೋಜನ ನೀಡಿದೆ. ಇದರಡಿ ೧೦ ಸಾವಿರದಿಂದ ೫೦ ಸಾವಿರದ ವರೆಗೆ ಪ್ರಯೋಜನ ಸಿಕ್ಕಿದೆ ಎಂದು ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ೧,೮೦೦ ಕೋಟಿ ರೂ. ಸಾಲವನ್ನು ನರೇಂದ್ರ ಮೋದಿಯವರು ಕೊಟ್ಟಿದ್ದಾರೆ. ಈ ರೀತಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಒತ್ತನ್ನು ಕೊಟ್ಟ ಪರಿಣಾಮವಾಗಿ ಬಡತನ ರೇಖೆಗಿಂತ ಕೆಳಗಿದ್ದ ಜನರಲ್ಲಿ ಶೇ ೫೦ರಷ್ಟು ಜನರು ಈ ರೇಖೆಯಿಂದ ಮೇಲೆ ಬಂದುದನ್ನು ಕಾಣಬಹುದು. ರಾಜ್ಯದಲ್ಲಿ ಉಜ್ವಲ ಯೋಜನೆಯಡಿ ೩೫.೫೭ ಲಕ್ಷ ಗ್ಯಾಸ್ ಸಂಪರ್ಕವನ್ನು ಕೊಟ್ಟಿದ್ದೇವೆ. ಜಲ ಜೀವನ್‌ನಡಿ ಶೇ ೨೪ರಷ್ಟು ಮನೆಗಳಿಗೆ ಮಾತ್ರ ಈ ಹಿಂದೆ ನಳ್ಳಿ ನೀರಿನ ಸೌಕರ್ಯವಿತ್ತು. ಅದನ್ನು ನಾವು ಶೇ ೫೦ ಮೀರಿಸಿದ್ದೇವೆ. ಕರ್ನಾಟಕದಲ್ಲಿ ೭೦.೧೨ ಲಕ್ಷ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕೊಟ್ಟಿದ್ದಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!