ಉದಯವಾಹಿನಿ, ಬೆಂಗಳೂರು:  ಕೋಲಾರ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಫಲಿತಾಂಶ ಕಾಂಗ್ರೆಸ್ ಪರ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ವ್ಯಕ್ತಪಡಿಸಿದ್ದಾರೆ.’ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಹೇಳಿದ ಅಭ್ಯರ್ಥಿಗೆ ಕೋಲಾರದಲ್ಲಿ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆಂದು ಭರವಸೆ ನೀಡಿದ್ದೇನೆ. ಅಲ್ಲಿ 7 ಬಾರಿ ನಾನು ಗೆಲುವು ಕಂಡಿದ್ದು, 30 ವರ್ಷಗಳ ಸುದೀರ್ಘ ಅನುಭವವಿದೆ. ನಾನು ಆ ಕ್ಷೇತ್ರದಲ್ಲಿ ಸೋಲು ಕಂಡಿದ್ದೇನೆ. ಆ ಕ್ಷೇತ್ರವನ್ನು ಗೆಲ್ಲಬೇಕಿದೆ ಎಂಬ ಕಾರಣಕ್ಕಾಗಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೇನೆ ಎಂದರು.
ನಾನು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸೇರಿದಂತೆ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದೇನೆ. ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ನಾನು ಮಾಡಿದ ಮನವಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರೆಲ್ಲರೂ ಒಪ್ಪಿಕೊಂಡಿದ್ದರು.ಆದರೆ ಅದರ ನಂತರ ಪರ್ಯಾಯ ಅಭ್ಯರ್ಥಿ ಹುಡುಕುತ್ತಿರುವುದು ಸರಿಯಲ್ಲ. ಅದು ಗೆಲುವಿಗೆ ಸಹಕಾರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ನಮ್ಮನ್ನೆಲ್ಲಾ ಒಂದು ಮಾಡಿ, ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ಒತ್ತಾಯಿಸಿದರು.

ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಈ ಹಿಂದೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾವು ಭರವಸೆ ನೀಡಿದ್ದೆವು. ಮೇಧಾವಿ ರಮೇಶ್‍ಕುಮಾರ್ ಕೂಡ ಆ ಸಭೆಯಲ್ಲಿದ್ದರು. ನಾವೆಲ್ಲಾ ಒಟ್ಟಿಗೆ ಇರಬೇಕು ಎಂಬ ಅವರ ಭಾವನೆಗೆ ನಾನೂ ಕೂಡ ಸಹಮತ ವ್ಯಕ್ತಪಡಿಸಿದ್ದೆ. ಆದರೆ ಈಗ ಬೇರೆ ಅಭ್ಯರ್ಥಿಯನ್ನು ಹುಡುಕಲಾಗುತ್ತಿದೆ.
ನಮ್ಮನ್ನು ಒಂದು ಮಾಡಿ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಿಲ್ಲವೇ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ. ಎರಡೂ ಬಣದವರು ಒಪ್ಪುವುದಿಲ್ಲ. ಸೋಲಲಿ, ಗೆಲ್ಲಲಿ ಎಂದು ಬೇರೆ ಅಭ್ಯರ್ಥಿಯನ್ನು ಕೊಟ್ಟು ಕೈತೊಳೆದುಕೊಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಇನ್ನಷ್ಟು ಕೃಷಿ ಮಾಡಬೇಕು.

ನಾನು ಚುನಾವಣೆಯಲ್ಲಿ ಸೋತರೂ ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಬೇಕು, ನಮ್ಮ ಸ್ವಪ್ರತಿಷ್ಠೆಯಿಂದ ಕಾಂಗ್ರೆಸ್ ಹಾಳಾಗಬಾರದು ಎಂಬ ಕಾರಣಕ್ಕೆ ಅವರಿಗೆ ನಾನು ವಿರೋಧ ವ್ಯಕ್ತಪಡಿಸಲಿಲ್ಲ. ನನಗೆ ಗೊತ್ತಿಲ್ಲದಂತೆ ನನ್ನನ್ನು ಸೋಲಿಸಿದವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು, ವಿಧಾನಸಭೆಯಲ್ಲಿ ಟಿಕೆಟ್ ನೀಡಿದರು, ಸಚಿವರನ್ನಾಗಿಯೂ ಮಾಡಿದರು. ನಾನು ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ. ಪಕ್ಷದ ದೂರದೃಷ್ಟಿಯಿಂದಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!