ಉದಯವಾಹಿನಿ, ವಿಜಯಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾರಿಗಾದರೂ ಟಿಕೆಟ್ ಕೊಡಲಿ, ಕಳೆದ ವಿಧಾನಸಭಾ ಚುನಾವಣೆಗಿಂತಲೂ ಹೆಚ್ಚಿನ ಮತಗಳನ್ನು ಪಕ್ಷಕ್ಕೆ ತಂದುಕೊಡುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಕರೆ ನೀಡಿದರು.
ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರೊಟ್ಟಿಗೆ ಚುನಾವಣೆ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯಾದ ಸಮಸ್ಯೆಯಾಗುವುದಿಲ್ಲ. ಜೆಡಿಎಸ್-ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಅದು ಕೇವಲ ಹೊರಗಿನ ತೋರಿಕೆಯೆ ಹೊರತು, ಬಿಜೆಪಿಯ ಸಿದ್ಧಾಂತಗಳನ್ನು ಜೆಡಿಎಸ್ ನಾಯಕರು ಒಪ್ಪುವುದಿಲ್ಲ. ಕುಟುಂಬದ ಉಳಿವಿಗಾಗಿ ಬಿಜೆಪಿ ಜೊತೆ ಹೋಗಿರುವ ಅವರಿಗೆ ಕೊಟ್ಟಿರುವ ೩ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಒಂದೇ ಕುಟುಂಬದವರು ಪಡೆದುಕೊಂಡಿದ್ದಾರೆ. ಒಂದು ಕುಟುಂಬ ಉಳಿಸುವುದಕ್ಕಾಗಿ ರಾಜ್ಯದಲ್ಲಿನ ಜೆಡಿಎಸ್ ಕಾರ್ಯಕರ್ತರು, ಬೂತ್ ಮಟ್ಟದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮತ ಚಲಾಯಿಸುತ್ತಾರೆ ಎನ್ನುವುದು ಶುದ್ಧಸುಳ್ಳು.ಎರಡೂ ಪಕ್ಷಗಳ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವ ಕಾರ್ಯಕರ್ತರು ಇದ್ದಾರೆ ಎಂದರು.
ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ ಮಾತನಾಡಿ, ಕಳೆದ ೧೦ ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ದುರಾಡಳಿತ ನಡೆಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಯುವಕರಿಗೆ ಉದ್ಯೋಗ ಕೊಡಲಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದವರು, ರಸಗೊಬ್ಬರಗಳ ಬೆಲೆ ಜಾಸ್ತಿ ಮಾಡಿದರು. ಕಪ್ಪು ಹಣ ವಾಪಸ್ ತರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉದ್ಯೋಗ ಅವಕಾಶಗಳನ್ನು ನೀಡಲು ಸ್ಥಾಪನೆ ಮಾಡಿದ್ದ ಎಲ್ಲಾ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದರು. ವಿಶ್ವವಿದ್ಯಾಲಯಗಳನ್ನು ಖಾಸಗೀಕರಣ ಮಾಡಿದರು, ರಾಜ್ಯದಲ್ಲಿ ಅತಿವೃಷ್ಟಿಯಾಗಿ ರೈತರು ಕೋಟ್ಯಾಂತರ ರೂಪಾಯಿಗಳಷ್ಟು ಬೆಳೆ ನಷ್ಟವಾದರೂ ಒಂದು ದಿನವೂ ಪ್ರಧಾನಿ ನರೇಂದ್ರಮೋದಿ ಬರಲಿಲ್ಲ. ಪರಿಹಾರವನ್ನೂ ಕೊಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಚುನಾವಣೆಯ ಸಮಯದಲ್ಲಿ ನೀಡಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ. ಗ್ಯಾರಂಟಿಗಳನ್ನು ಕೊಡಬಾರದೆಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದಾರೆ. ಇದೆಲ್ಲವನ್ನೂ ದೇಶದ ಜನತೆ ಗಮನಿಸುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!