ಉದಯವಾಹಿನಿ, ಬೆಂಗಳೂರು: ಲೋಕಸಭೆಯ 18ನೇ ಅವಧಿಗೆ ನಡೆಯುತ್ತಿರುವ ಚುನಾವಣೆಗಾಗಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ತಮ್ಮ ಎಲ್ಲಾ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಚುನಾವಣಾ ಕಣ ಕಾವೇರಲಾರಂಭಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯೊಂದಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ನಿಲ್ಲಿಸಿದ್ದರೆ, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲದೆ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ವಿವಿಧ ಪಕ್ಷಗಳೊಂದಿಗೆ ಇಂಡಿಯಾ ರಾಜಕೀಯ ಕೂಟವನ್ನು ರಚಿಸಿಕೊಂಡಿದೆ. ಆದರೆ ಆ ಪಕ್ಷಗಳಿಂದ ಈವರೆಗೆ ಯಾವುದೇ ಅಭ್ಯರ್ಥಿಗಳು ಕಣದಲ್ಲಿರುವುದು ಕಂಡುಬಂದಿಲ್ಲ.
ನಿನ್ನೆ ಜೆಡಿಎಸ್ ತನ್ನ ಮೂರು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಇಂದು ಬೆಳಗ್ಗೆ ಕಾಂಗ್ರೆಸ್ ಕೊನೆಯದಾಗಿ ಕೋಲಾರ ಕ್ಷೇತ್ರಕ್ಕೆ ಕೆ.ವಿ.ಗೌತಮ್ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮೂರು ಪಕ್ಷಗಳು ತಮ್ಮ ಹುರಿಯಾಳುಗಳನ್ನು ಅಖಾಡಕ್ಕಿಳಿಸಿವೆ.
ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಬಂಡಾಯದ ಆತಂಕ ಇದ್ದರೆ ಬಿಜೆಪಿಗೆ 7ರಿಂದ 8 ಕ್ಷೇತ್ರಗಳಲ್ಲಿ ಅಸಮಾಧಾನಿತರ ಕಾವು ಹೆಚ್ಚಾಗಿದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಏ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
