
ಉದಯವಾಹಿನಿ,ಬೆಂಗಳೂರು: ವಿಕಸಿತ ಭಾರತ ಮಾಡುವುದಾಗಿ ಹೇಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮವನ್ನೂ ಆರಂಭಿಸಿಲ್ಲ. ಇರುವ ಸರ್ಕಾರಿ ಆಸ್ತಿಗಳನ್ನೇ ಮಾರಾಟ ಮಾಡಿಕೊಂಡರು. ಈಗ ತಮ್ಮನ್ನು ತಾವು ದೇವರು ಕಳುಹಿಸಿದ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ ಪುಣ್ಯಸರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿಯೇನು ದೇವರ ಅವತಾರವೇ ಎಂದು ಸಿಡಿಮಿಡಿಯಾದರು.ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಜವಾಹರಲಾಲ್ ನೆಹರೂ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿ ಮಾಡಲು ಮುಂದಾದರು. 17 ವರ್ಷಗಳ ದೀರ್ಘ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಭವಿಷ್ಯದ ಭಾರತವನ್ನು ಕಟ್ಟುವ ಕೆಲಸ ಮಾಡಿದರು. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎನ್ನುವ ಬದ್ಧತೆ ಉಳ್ಳವರಾಗಿದ್ದರು. ಆಗ ಮಾತ್ರ ವಿಶ್ವದ ಅಭಿವೃದ್ಧಿ ಸಾಧ್ಯ ಎನ್ನುವ ನಂಬಿಕೆ ಹೊಂದಿದ್ದರು ಎಂದು ವಿವರಿಸಿದರು.
ನೆಹರೂ ಇತಿಹಾಸಕಾರರೂ ಆಗಿದ್ದರು. ದೇಶದ ಇತಿಹಾಸ ಗೊತ್ತಿದ್ದರಿಂದಲೇ ಅವರು ದೇಶದ ಭವಿಷ್ಯ ರೂಪಿಸಿದರು. ಅಂಬೇಡ್ಕರ್‌ಅವರ ಮಾತಿನಂತೆ, ಇತಿಹಾಸ ಗೊತ್ತಿದ್ದವರು ಮಾತ್ರ ದೇಶದ ಭವಿಷ್ಯ ರೂಪಿಸಬಲ್ಲರು. ನೆಹರೂ ಈ ಕೆಲಸ ಮಾಡಿ ದೇಶವನ್ನು ಕಟ್ಟಿ ಬೆಳೆಸಿದರು ಎಂದು ಉದಾಹರಣೆಗಳ ಸಮೇತ ವಿವರಿಸಿದರು.
