ಉದಯವಾಹಿನಿ, ಮೈಸೂರು : ಸೂರಜ್ ರೇವಣ್ಣ ದೈವ ಭಕ್ತನಾದರೇ ಪ್ರಜ್ವಲ್ ರೇವಣ್ಣ ಹೇಗೆ? ಎನ್ನುವ ಪ್ರಶ್ನೆ ಎಚ್‌ಡಿ ರೇವಣ್ಣ ಅವರ ಮಾತಿನಿಂದ ಮೂಡಿದೆ. ಇಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ತಮ್ಮಿಬ್ಬರು ಮಕ್ಕಳ ಬಗ್ಗೆ ಮಾತನಾಡಿದ ರೀತಿ ಕೆಲ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿ ರೇವಣ್ಣ ಅವರು, ‘ನಾನು ಸದ್ಯ ಪ್ರಜ್ವಲ್ ರೇವಣ್ಣನನ್ನು ನೋಡಲು ಹೋಗುವುದಿಲ್ಲ. ನಾನು ಪ್ರಜ್ವಲ್ ಭೇಟಿಗೆ ಹೋದರೆ ಏನೋ ಹೇಳಿಕೊಟ್ಟ ರೇವಣ್ಣ ಅಂತಾರೆ. ಹೀಗಾಗಿ ನಾನು ಪ್ರಜ್ವಲ್ ಭೇಟಿ ಮಾಡುವುದಿಲ್ಲ’ ಎಂದು ಹೇಳಿದರು.
ಹಾಗೇ ಸೂರಜ್ ರೇವಣ್ಣ ಅವರನ್ನು ಭೇಟಿ ಮಾಡಲು ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ‘ಸೂರಜ್ ದೈವ ಭಕ್ತ. ಆತ ಸಲೀಸಾಗಿ ಜೈಲಿನಿಂದ ಹೊರಬರುತ್ತಾನೆ. ಸದ್ಯ ಯಾವ ವಿಚಾರಗಳನ್ನೂ ನಾನು ಮಾತನಾಡುವುದಿಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇದೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಲ್ಲದಕ್ಕೂ ಕಾಲ ಉತ್ತರ ನೀಡಲಿದೆ. ನಾನು ಯಾವುತ್ತೂ ಯಾವುದಕ್ಕೂ ಹೆದರುವುದಿಲ್ಲ’ ಎಂದು ರೇವಣ್ಣ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾತನಾಡುವಾಗ ಅವರನ್ನು ರೇವಣ್ಣ ಭೇಟಿ ಮಾಡಲು ತೆರಳುವುದಿಲ್ಲ ಎಂದಷ್ಟೇ ಹೇಳಿದರು. ಆದರೆ ಸೂರಜ್ ರೇವಣ್ಣ ಅವರ ಬಗ್ಗೆ ಕೇಳಿದಾಗ ಅವರು ಹೇಳಿದ್ದು, ಸೂರಜ್ ದೈವ ಭಕ್ತ ಎಂದು. ಹಾಗಾದರೆ ಸೂರಜ್ ದೈವ ಭಕ್ತನಾದರೆ ಪ್ರಜ್ವಲ್ ದೈವ ಭಕ್ತರಲ್ಲವೇ? ಅವರು ದೇವರನ್ನು ನಂಬುವುದಿಲ್ಲವೇ? ಪ್ರಜ್ವಲ್ ಸಲೀಸಾಗಿ ಹೊರಬರುವುದಿಲ್ಲವೇ? ಎನ್ನುವ ಪ್ರಶ್ನೆಗಳು ಉದ್ಬವಿಸಿವೆ.
ಸಾಮಾನ್ಯವಾಗಿ ಎಚ್‌ಡಿ ರೇವಣ್ಣ ಆಧ್ಯಾತ್ಮದಲ್ಲಿ ಹೆಚ್ಚು ನಂಬಿಕೆ ಉಳ್ಳವರು. ಹೋದಲ್ಲಿ ಬಂದಲ್ಲಿ ಜೊತೆಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡಾಡುವ ರೇವಣ್ಣ ಎಲ್ಲವನ್ನೂ ದೇವರ ಮೇಲೆ ಬಿಡುತ್ತಾರೆ. ಸದ್ಯ ನಡೆಯುವ ಘಟನೆಯಿಂದ ದೇವರು ಕಾಪಾಡುತ್ತಾನೆ ಎಂದೇ ಅವರು ನಂಬಿದ್ದಾರೆ.
