ಉದಯವಾಹಿನಿ, ಗುತ್ತಲ: ಹಾವೇರಿ ತಾಲ್ಲೂಕಿನ ಪೂರ್ವ ಬಾಗದ ಗ್ರಾಮಗಳಾದ ಕಂಚಾರಗಟ್ಟಿ, ಹರಳಹಳ್ಳಿ, ಹಾವನೂರ, ಹಾಂವಶಿ, ಶಾಕಾರ, ಹುರಳಿಹಾಳ, ಗಳಗನಾಥ, ಮೇವುಂಡಿ, ತೇರದಹಳ್ಳಿ, ಬೆಳವಗಿ ಗ್ರಾಮಗಳು ತುಂಗಭದ್ರಾ ನದಿಯ ಪ್ರವಾಹಕ್ಕೆ ತತ್ತರಿಸಿವೆ. ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಶೇಂಗಾ, ಹೂಕೋಸು, ಎಲೆಕೋಸು,ಕಬ್ಬು,ಭತ್ತ ಹಾಗೂ ಚೆಂಡು ಹೂವು, ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳು ಪ್ರವಾಹದಲ್ಲಿ ಸಂಪೂರ್ಣ ಜಲಾವೃತಗೊಂಡಿವೆ. ಬೆಳೆ ಕಳೆದುಕೊಂಡ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಹಾವೇರಿ ತಾಲ್ಲೂಕಿನ ಗಡಿ ಗ್ರಾಮಗಳಾದ ಹಾಂವಶಿ ಮತ್ತು ಶಾಕಾರ ಗ್ರಾಮಗಳು ತುಂಗಭದ್ರ ನದಿಯ ಪ್ರವಾಹಕ್ಕೆ ನಡುಗಡ್ಡೆಯಾಗಿವೆ. ಈ ಗ್ರಾಮಗಳ ಮಧ್ಯ ನೀರು ಬಂದು ಸಂಪರ್ಕ ಕಡಿತಗೊಂಡಿದೆ.ಹಾಂವಶಿ ಗ್ರಾಮಸ್ಥರು ಕೇವಲ 5 ಕಿ.ಮೀ ದೂರ ಇರುವ ಹೊಳಲ ಗ್ರಾಮಕ್ಕೆ 30 ಕಿ.ಮೀ ಸುತ್ತುವರೆಯಬೇಕಾಗಿದೆ. ವೃದ್ದರು ಮತ್ತು ಶಾಲಾ ಮಕ್ಕಳು ಮಕರಬ್ಬಿ,ಕಾಂತೆಬೆನ್ನೂರ ಮತ್ತು ಬಿರಬ್ಬಿ ಮಾರ್ಗವಾಗಿ ಹೊಳಲ ಗ್ರಾಮಕ್ಕೆ ಬರುತ್ತಿದ್ದಾರೆ.’40 ವರ್ಷಗಳಿಂದ ಹಾವನೂರ ಮತ್ತು ಶಾಕಾರ ಗ್ರಾಮಗಳ ಮಧ್ಯ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಹಾಂವಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಕಾಟೇನಹಳ್ಳಿ ದೂರಿದ್ದಾರೆ.
ಹೊಳಲು ಗ್ರಾಮಕ್ಕೆ ಶಾಲೆಗೆ ಹೋದ ಶಾಕಾರ ಗ್ರಾಮದ ಶಾಲಾ ಮಕ್ಕಳು ಗುರುವಾರ ಸಂಜೆ ಮರಳಿ ಬರುವಾಗ ಪ್ರವಾಹಕ್ಕೆ ಜಲಾವೃತಗೊಂಡ ರಸ್ತೆ ದಾಟುತ್ತಿರುವುದನ್ನು ಕಂಡ ಗ್ರಾಮ ಪಂಚಾಯತಿ ಅಧ್ಯಕ್ಷರು ಸುರಕ್ಷಿತವಾಗಿ ಗ್ರಾಮಕ್ಕೆ ಕರೆತಂದಿದ್ದಾರೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಿಸದಿದ್ದರೆ ಹೋರಾಟ ಮಾಡುವಲಾಗುವುದು ಎಂದು ಹಾಂವಶಿ ಮತ್ತು ಶಾಕಾರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
