ಉದಯವಾಹಿನಿ, ಬೆಂಗಳೂರು: ಕೇಂದ್ರದ ವಿಬಿಜಿರಾಮ್‌ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ದಿನಪತ್ರಿಕೆಗಳಲ್ಲಿ ಕೊಟ್ಟಿರುವ ಜಾಹೀರಾತು ಇವತ್ತು ವಿಧಾನಸಭೆಯಲ್ಲಿ ಗದ್ದಲ ಕೋಲಾಹಲ ಸೃಷ್ಟಿಸಿ ವಿಪಕ್ಷ ಸದಸ್ಯರ ಸಭಾತ್ಯಾಗಕ್ಕೆ ವೇದಿಕೆ ಒದಗಿಸಿತ್ತು. ವಿಷಯ ಪ್ರಸ್ತಾಪಿಸಿ ಮಾತನಾಡಿದ ಶಾಸಕ ಸುರೇಶ್ ಕುಮಾರ್ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಈ ಜಾಹೀರಾತು ನೀಡಲಾಗಿದೆ. ಇದು ಜನರ ತೆರಿಗೆಯ ಲೂಟಿ. ಸೇಡಿನ ರಾಜಕೀಯ. ತೆರಿಗೆ ಹಣ ಬಳಸಿರುವುದು ಸರಿಯಲ್ಲ. ಪಕ್ಷದ ವತಿಯಿಂದ ಬೇಕಿದ್ದರೆ ಜಾಹೀರಾತು ನೀಡಲಿ ಎಂದು ಆಕ್ಷೇಪ ಎತ್ತಿದರು.
ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಒಪ್ಪಿಕೊಳ್ಳಬೇಕು. ರಾಜ್ಯ ಸರಕಾರ ಜಾರಿಗೆ ತಂದಿರುವ ಯಾವುದೋ ಯೋಜನೆ, ಕಾಯ್ದೆಗಳಿಗೆ ಬಿಜೆಪಿ ಬೆಂಬಲಿತ ಗ್ರಾಪಂಗಳು, ನಗರ ಸಭೆಗಳು, ಜಿಲ್ಲಾ ಪಂಚಾಯತ್ ಗಳು ವಿರೋಧಿಸಿ ಜಾಹೀರಾತು ಕೊಟ್ಟರೆ ಸರಕಾರ ಒಪ್ಪುತ್ತದೆಯೇ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು. ಇದು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತ್ತು. ಸಚಿವ ದಿನೇಶ್ ಗುಂಡೂರಾವ್ ಮಾತಾಡಿ, ನಮಗೆ ಕೇಂದ್ರ ಸರಕಾರದಿಂದ ಬರಬೇಕಿದ್ದ ಹಣವನ್ನು ಸುಪ್ರೀಂ ಕೋರ್ಟ್ ಮೂಲಕ ತರಬೇಕಾಗುತ್ತದೆ. ಆಗ ನಿಮಗೆ ಒಕ್ಕೂಟ ವ್ಯವಸ್ಥೆ ನೆನಪಾಗುವುದಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಆಗ ನಿಮಗೆ ಒಕ್ಕೂಟ ವ್ಯವಸ್ಥೆ ನೆನಪಾಗುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
