ಉದಯವಾಹಿನಿ, ವಿಜಯಪುರ: ಮನಕುಲದ ಕಲ್ಯಾಣ, ದೀನ ದಲಿತರ ಉದ್ಧಾರ, ನಾಡು-ನುಡಿಗಳ ಏಳಿಗೆ, ಸತ್ಯ-ಧರ್ಮ-ಶಾಂತಿ ಸ್ಥಾಪನೆಗಾಗಿ ತಮ್ಮ ಅನಂತ ಪುಣ್ಯರಾಶಿಯ ಫಲವನ್ನು ಧಾರೆಯೆರೆಯುತ್ತ ಕಲಿಯುಗದ ಕಾಮಧೇನು-ಕಲ್ಪವೃಕ್ಷ ಸದೃಶರಾಗಿ ಭಕ್ತ ಜನರ ಕಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ಅನುಗ್ರಹಿಸುತ್ತಿರುವರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೩ನೇ ಆರಾಧನಾ ಮಹೋತ್ಸವದಂಗವಾಗಿ ಇಂದು ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಅತ್ಯಂತ ಭಕ್ತಿಪುರಸ್ಸರವಾಗಿ ಜರುಗಿತು.
ಅದರಂಗವಾಗಿ ಬೆಳಿಗ್ಗೆ ಸುಪ್ರಭಾತ,ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ ಜರುಗಿದವು. ಬಳಿಕ ನಡೆದ ಅಷ್ಟೋ ತ್ತರ ಸಹಿತ ಫಲಪಂಚಾಮೃತ ಅಭಿಷೇಕ ಸಕ ಭಕ್ತರ ಮನದಲ್ಲಿ ಭಕ್ತಿ ಭಾವ ಮೆರೆಯಿತು.
ಬಳಿಕ ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆಯನ್ನು ನೆರವೇರಿಸಲಾಯಿತು.ಬಳಿಕ ಅರ್ಚನೆ ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಜರುಗಿ ತೀರ್ಥ ಪ್ರಸಾದ ನಡೆಯಿತು.
ಮಧ್ಯಾರಾಧನೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಬಂದು ಗುರುಸಾರ್ವಭೌಮರ ವೃಂದಾವನದ ದರ್ಶನ ಪಡೆದು ಪುನೀತರಾದರು. ಭಕ್ತರು ತಮಗೆ ತಿಳಿದಂತೆ ವೃಂದಾವನದ ಸುತ್ತ ಪ್ರದಕ್ಷಿಣೆ ಹಾಕುತ್ತ, ಮನದಲ್ಲಿ ಗುರುರಾಯ ರನ್ನು ಸ್ಮರಿಸುತ್ತ, ಭಕ್ತಿಯಿಂದ ಮನದಾಳದಲ್ಲಿ ಪ್ರಾರ್ಥಿಸುತ್ತಿದ್ದುದು ಕಂಡು ಬಂದಿತು.
